Home Crime ಬೈಕ್ ಟ್ಯಾಕ್ಸಿಯಲ್ಲಿ ಹೊರಟಿದ್ದ ಯುವತಿಗೆ ಆರ್ ಟಿಸಿ ಬಸ್ ಢಿಕ್ಕಿಯಾಗಿ ಸಾವು…!!

ಬೈಕ್ ಟ್ಯಾಕ್ಸಿಯಲ್ಲಿ ಹೊರಟಿದ್ದ ಯುವತಿಗೆ ಆರ್ ಟಿಸಿ ಬಸ್ ಢಿಕ್ಕಿಯಾಗಿ ಸಾವು…!!

ಹೈದರಾಬಾದ್: ನಗರದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್ ಟ್ಯಾಕ್ಸಿಯಲ್ಲಿ ಹೊರಟಿದ್ದ ಯುವತಿಗೆ ಆರ್ ಟಿಸಿ ಬಸ್ ಢಿಕ್ಕಿಯಾದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತೆಲಂಗಾಣ ರಾಜಧಾನಿ ಹೈದರಾಬಾದ್ ನ ಶ್ರೀನಗರ ಕಾಲನಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಘಟನೆಯ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಟಿಜಿಎಸ್‌ಆರ್‌ಟಿಸಿ ಬಸ್‌ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ 26 ವರ್ಷದ ಯುವತಿ ಮೃತಪಟ್ಟಿದ್ದು, ಬೈಕ್‌ ಸವಾರ ಹಾಗೂ ಸ್ಕೂಟರ್‌ ಸವಾರ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ. ಮೃತ ಯುವತಿಯನ್ನು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಹೇಮಾ ದುರ್ಗಾ ಎಂದು ತಿಳಿದು ಬಂದಿದೆ.

ಅವರು ಬಂಜಾರಾ ಹಿಲ್ಸ್‌ನ ಕಾರ್‌ ಶೋರೂಂನಲ್ಲಿ ಗ್ರಾಹಕ ಸಂಬಂಧ ನಿರ್ವಾಹಕಿಯಾಗಿ (ಕಸ್ಟಮರ್‌ ರಿಲೇಶನ್‌ಶಿಪ್‌ ಎಕ್ಸಿಕ್ಯೂಟಿವ್‌) ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿಕೊಂಡು ಮನೆಗೆ ತೆರಳಲು ಹೇಮಾ ದುರ್ಗಾ ರಾಪಿಡೋ ಬೈಕ್‌ ಟ್ಯಾಕ್ಸಿ ಬುಕ್‌ ಮಾಡಿದ್ದರು. ಶ್ರೀನಗರ ಕಾಲನಿ ಮಾರ್ಗದಲ್ಲಿ ವ್ಯಾಲ್ಯೂ ಝೋನ್‌ ಸ್ಟೋರ್ಸ್‌ನ ಹಿಂಭಾಗದ ಬಳಿ ಅಪಘಾತ ಸಂಭವಿಸಿದೆ ಎಂದು ತಿಳಿಯಲಾಗಿದೆ.

ಅಪಘಾತ ನಡೆದ ಸ್ಥಳದಲ್ಲಿ ರಸ್ತೆ ಕಿರಿದಾಗಿತ್ತು. ಈ ವೇಳೆ ಟಿಜಿಎಸ್‌ಆರ್‌ಟಿಸಿ ಬಸ್‌ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನೆಯಲ್ಲಿ ಹೇಮಾ ದುರ್ಗಾ ಮೃತಪಟ್ಟಿದ್ದು, ಬೈಕ್‌ ಹಾಗೂ ಸ್ಕೂಟರ್‌ ಸವಾರರು ಗಾಯಗೊಂಡಿದ್ದಾರೆ.