ಮೂಡುಬಿದಿರೆ: ಜಾರ್ಖಂಡ್ ಮೂಲದ ಮಹಿಳೆಯೊಬ್ಬರು ದರೆಗುಡ್ಡೆ ಸಮೀಪದ ಕಕ್ಕೆಕಾಡು ಬಳಿಯ ಮನೆಯಿಂದ ನಾಪತ್ತೆಯಾಗಿರುವ ಘಟನೆ ಜೂನ್ 9 ರಂದು ನಡೆದಿದೆ.
ನಾಪತ್ತೆಯಾದ ಮಹಿಳೆ ಕರ್ಮೇಲಾ ಸೋರೆನ್( 48) ಎಂದು ತಿಳಿದು ಬಂದಿದೆ.
ಕಳೆದ ಎರಡು ವರ್ಷಗಳಿಂದ ಆನೆಗುಡ್ಡೆ ಮತ್ತು ದರೆಗುಡ್ಡೆ ಮಧ್ಯದ ಕಕ್ಕೆಕಾಡು ನಿವಾಸಿಯೊಬ್ಬರ ಮನೆಯಲ್ಲಿ ಕೆಲಸಕ್ಕಿದ್ದ ಈಕೆ, ಜೂನ್ 9 ರ ಮಧ್ಯಾಹ್ನ ಯಾರಿಗೂ ತಿಳಿಸದೆ ಮನೆಯಿಂದ ಹೊರಟಿದ್ದಾಳೆ ಎಂದು ತಿಳಿದು ಬಂದಿದೆ.
ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮಹಿಳೆ ನಡೆದುಕೊಂಡು ಹೋಗುತ್ತಿರುವುದು ದಾಖಲಾಗಿದೆ ಎಂದು ತಿಳಿದು ಬಂದಿದೆ.
ದರೆಗುಡ್ಡೆ ರಸ್ತೆಯ ಮೂಲಕ ತೆರಳಿದ ಈಕೆ, ಮಧ್ಯಾಹ್ನ 2.30 ರ ಸುಮಾರಿಗೆ ಖಾಸಗಿ ಬಸ್ ಹತ್ತಿರುವುದು ಖಚಿತವಾಗಿದೆ. ಬಸ್ ನಿರ್ವಾಹಕರು ನೀಡಿದ ಮಾಹಿತಿಯ ಪ್ರಕಾರ, ಮಧ್ಯಾಹ್ನ 2.45 ಕ್ಕೆ ಮಹಿಳೆ ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ಇಳಿದಿದ್ದಾಳೆ. ಬಸ್‌ನಲ್ಲಿ ಟಿಕೆಟ್ ಕೇಳಿದಾಗ ಈಕೆ ಸರಿಯಾಗಿ ಸ್ಪಂದಿಸಿಲ್ಲ ಹಾಗೂ ಮಾನಸಿಕವಾಗಿ ಸ್ವಲ್ಪ ಅಸ್ವಸ್ಥಗೊಂಡಂತೆ ಕಂಡುಬಂದಿದ್ದಾಳೆ ಎಂದು ತಿಳಿದುಬಂದಿದೆ.
ನಾಪತ್ತೆಯಾದ ಮಹಿಳೆಯ ಮೊಬೈಲ್ ಫೋನ್ ಮಧ್ಯಾಹ್ನ ಸ್ವಿಚ್ ಆಫ್ ಆಗಿದ್ದು ಕೊನೆಯ ಟವರ್ ಲೊಕೇಶನ್ ಮೂಡುಬಿದಿರೆಯ ‘ಪಂಚರತ್ನ ಹೋಟೆಲ್ ‘ ಬಳಿ ತೋರಿಸುತ್ತಿದೆ ಎಂದು ತಿಳಿದುಬಂದಿದೆ.
ನಾಪತ್ತೆಯಾದ ಸಂದರ್ಭ ಗುಲಾಬಿ ಬಣ್ಣದ ನೈಟಿ ಧರಿಸಿದ್ದು, ಕೈಯಲ್ಲಿ ನೀರಿನ ಬಾಟಲಿ ಹಾಗೂ ಚಿಪ್ಸ್ ಪ್ಯಾಕೆಟ್ ಹಿಡಿದುಕೊಂಡು ನಡೆದುಕೊಂಡು ಹೋಗುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಮೂಡುಬಿದಿರೆ ಬಸ್ ಸ್ಟಾಂಡ್, ಮಿಜಾರು, ಹಾಗೂ ಸಂಪಿಗೆ ಚರ್ಚ್ ರಸ್ತೆಯ ಮಾರ್ಕೆಟ್ ಮುಂತಾದ ಕಡೆಗಳಲ್ಲಿ ತೀವ್ರ ಹುಡುಕಾಟ ನಡೆಸಲಾಗಿದ್ದರೂ ಮಹಿಳೆಯ ಯಾವುದೇ ಸುಳಿವು ಲಭ್ಯವಾಗಿಲ್ಲ.
ಈ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.




