ಉಡುಪಿ: ನಗರಸಭೆಯ ಎಸ್‌ಸಿ–ಎಸ್‌ಟಿ ಆರೋಗ್ಯ ವಿಮಾ ಯೋಜನೆಯಲ್ಲಿನ ಅವ್ಯವಸ್ಥೆ ಕುರಿತು ಚರ್ಚಿಸಲು ದಲಿತ ಮುಖಂಡರ ಸಭೆ ಕರೆದು, ಸುಮಾರು ಎರಡು ಗಂಟೆಗಳ ಕಾಲ ಕಾಯಿಸಿ ಬಳಿಕ ಸಭೆಗೆ ಬಾರದ ಮೂಲಕ ದಲಿತ ಮುಖಂಡರನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಅವರು ನಗರಸಭೆ ಪೌರಾಯುಕ್ತ ಮಹಾಂತೇಶ್ ಹಂಗರಗಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ತಿಂಗಳು ಜಿಲ್ಲಾಧಿಕಾರಿಗಳ ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡರು ನಗರಸಭೆಯ ದಲಿತರ ಆರೋಗ್ಯ ವಿಮಾ ಯೋಜನೆಯಲ್ಲಿ ನಡೆಯುತ್ತಿರುವ ಅವ್ಯವಸ್ಥೆಗಳ ಬಗ್ಗೆ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ದಲಿತ ಮುಖಂಡರ ಸಭೆ ಕರೆದು ಸಮಸ್ಯೆಗಳನ್ನು ಪರಿಹರಿಸುವಂತೆ ಜಿಲ್ಲಾಧಿಕಾರಿಗಳು ಪೌರಾಯುಕ್ತರಿಗೆ ಸೂಚಿಸಿದ್ದರು.
ಇದರಂತೆ ಬುಧವಾರ ಬೆಳಗ್ಗೆ ಸುಮಾರು 11 ಗಂಟೆಗೆ ಪೌರಾಯುಕ್ತರು ಸಭೆ ಕರೆದಿದ್ದರು. ಆದರೆ, ದಲಿತ ಮುಖಂಡರನ್ನು ತಮ್ಮ ಕೊಠಡಿಯಲ್ಲಿ ಕೂರಿಸಿ, ಮೇಲಾಧಿಕಾರಿಗಳು ಹಾಗೂ ಮಾಜಿ ನಗರಸಭೆ ಸದಸ್ಯರನ್ನು ಕರೆಸಿ ಚರ್ಚೆ ನಡೆಸಿರುವುದು ಖಂಡನೀಯ ಎಂದು ಜಯನ್ ಮಲ್ಪೆ ಆರೋಪಿಸಿದ್ದಾರೆ.
ದಲಿತ ಮುಖಂಡರು ಸಭೆಗೆ ಆಗಮಿಸಿದ್ದರೂ ಅವರ ಸಮಸ್ಯೆಗಳನ್ನು ಆಲಿಸದೆ, ವಿಮಾ ಕಂಪನಿಯ ಪರವಾಗಿ ಪೌರಾಯುಕ್ತರು ನಡೆದುಕೊಂಡಿದ್ದಾರೆ ಎಂದು ಅವರು ದೂರಿದ್ದಾರೆ. ಅಲ್ಲದೆ, ದಲಿತರಿಗೆ ನೀಡಲಾಗಿರುವ ಆರೋಗ್ಯ ಕಾರ್ಡ್‌ಗಳನ್ನು ರದ್ದುಪಡಿಸುವಂತೆ ಜಿಲ್ಲಾಧಿಕಾರಿಗಳ ಕುಂದುಕೊರತೆ ಸಭೆಯಲ್ಲಿ ಹೇಳಿರುವುದಕ್ಕೆ ವಿರೋಧವಾಗಿ ಸಭೆ ನಡೆಸುವ ಬದಲು, ಇದೇ ಕಂಪನಿಯನ್ನು ಮುಂದುವರಿಸಲು ಶಾಸಕರ ನೇತೃತ್ವದಲ್ಲಿ ಒತ್ತಾಯಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
“ದಲಿತ ಮುಖಂಡರ ನೋವನ್ನು ವಿಚಾರಿಸದೆ, ಕೇವಲ ಅವ್ಯವಸ್ಥೆಯಲ್ಲಿರುವ ವಿಮಾ ಕಂಪನಿಯ ಪರವಾಗಿ ನಿಂತು ಪೌರಾಯುಕ್ತರ ಮೂಲಕ ದಲಿತ ಮುಖಂಡರಿಗೆ ಅವಮಾನ ಮಾಡಿಸಿರುವುದು ಖಂಡನೀಯ,” ಎಂದು ಜಯನ್ ಮಲ್ಪೆ ಹೇಳಿದ್ದಾರೆ.
ಉಡುಪಿ ನಗರಸಭೆಯಲ್ಲಿ ದಲಿತರ ಆರೋಗ್ಯ ವಿಮಾ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ವಿಮಾ ಕಂಪನಿಯ ಕಚೇರಿ ಇಲ್ಲ. ರೋಗಿಗಳು ಚಿಕಿತ್ಸೆಯ ಬಿಲ್ ಕ್ಲೇಮ್‌ಗಾಗಿ ಸಂಪರ್ಕಿಸಿದಾಗ ವಿಮಾ ಕಂಪನಿಯ ಸಿಬ್ಬಂದಿ ಉಡಾಫೆಯಾಗಿ ಉತ್ತರಿಸುತ್ತಿದ್ದಾರೆ. ಅಲ್ಲದೆ, ನೀಡಲಾಗಿರುವ ಹೆಲ್ತ್ ಕಾರ್ಡ್‌ನಲ್ಲಿ ಮನೆ ಸಂಖ್ಯೆ, ಕುಟುಂಬ ಸದಸ್ಯರ ವಿವರ ಹಾಗೂ ವಾರ್ಡ್‌ನ ಹೆಸರಿನಂತಹ ಅಗತ್ಯ ಮಾಹಿತಿಗಳೇ ಇಲ್ಲ ಎಂದು ಜಯನ್ ಮಲ್ಪೆ ಆರೋಪಿಸಿದ್ದಾರೆ.
“ನಿಮ್ಮ ಸರ್ಕಾರ ಯಾರ ಜೊತೆ ಬೇಕಾದರೂ ಚಲ್ಲಾಟವಾಡಲಿ. ಆದರೆ ದಲಿತರ ಜೊತೆ ಚಲ್ಲಾಟವಾಡಿದರೆ ಸುಮ್ಮನೆ ಬಿಡುವುದಿಲ್ಲ,” ಎಂದು ಜಯನ್ ಮಲ್ಪೆ ಎಚ್ಚರಿಕೆ ನೀಡಿದ್ದಾರೆ.
ಸಭೆಯಲ್ಲಿ ದಲಿತ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು, ಅಂಬೇಡ್ಕರ್ ಯುವಸೇನೆಯ ಅಧ್ಯಕ್ಷ ಗಣೇಶ್ ನೇರ್ಗಿ, ಮಾಜಿ ನಗರಸಭೆ ಅಧ್ಯಕ್ಷ ಯುವರಾಜ್ ಪುತ್ರನ್, ಮಾಜಿ ನಗರಸಭೆ ಉಪಾಧ್ಯಕ್ಷೆ ಸಂಧ್ಯಾ ತಿಲಕ್, ಹರೀಶ್ ಸಾಲ್ಯಾನ್, ಶಿವಾನಂದ ಮೂಡುಬೆಟ್ಟು, ದಲಿತ ಕಲಾಮಂಡಳಿಯ ಶಂಕರದಾಸ್, ಸುಂದರಿ ಪುತ್ರನ್, ದಿನೇಶ್ ಜವನೆರ್ಕಟ್ಟೆ ಸೇರಿದಂತೆ ಹಲವರು ಭಾಗವಹಿಸಿದ್ದರು.




