ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆಯ ಕಾರಣದಿಂದ ಶಾಲೆಗಳಿಗೆ ಘೋಷಿಸಲಾಗಿದ್ದ ರಜಾ ದಿನಗಳ ಕೊರತೆಯನ್ನು ಸರಿದೂಗಿಸಲು ಶಾಲಾ ಶಿಕ್ಷಣ ಇಲಾಖೆ ಮಹತ್ವದ ಮಾರ್ಗಸೂಚಿ ಹೊರಡಿಸಿದೆ. ನಷ್ಟವಾಗಿರುವ ಬೋಧನಾ ಅವಧಿಯನ್ನು ಸರಿದೂಗಿಸಲು ಸೆಪ್ಟೆಂಬರ್ 2ನೇ ವಾರದಿಂದಲೇ ಜಾರಿಗೆ ಬರುವಂತೆ ಶನಿವಾರ ಅಪರಾಹ್ನ ಪೂರ್ಣಾವಧಿ ಹಾಗೂ ಇತರ ದಿನಗಳ ಸಂಜೆ ಹೆಚ್ಚುವರಿ ತರಗತಿ ನಡೆಸಲು ಸೂಚಿಸಲಾಗಿದೆ.
ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ವಿದ್ಯಾರ್ಥಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಜಿಲ್ಲಾಡಳಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಿತ್ತು.
ತಾಲೂಕುವಾರು ರಜೆ ವಿವರ:
ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಬಂಟ್ವಾಳ ಮತ್ತು ಮೂಡುಬಿದಿರೆ: ಒಟ್ಟು 8 ಪೂರ್ಣ ದಿನಗಳು ಹಾಗೂ 1 ಅರ್ಧ ದಿನ.
ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯ ವಲಯ: ಒಟ್ಟು 9 ಪೂರ್ಣ ದಿನಗಳು.
ತರಗತಿ ಸರಿದೂಗಿಸುವುದು ಹೇಗೆ?
ಶನಿವಾರ ಪೂರ್ಣ ದಿನ ತರಗತಿ: ಶನಿವಾರದಂದು ಅಪರಾಹ್ನದ ಅವಧಿಯಲ್ಲೂ ಪೂರ್ಣ ಪ್ರಮಾಣದ ತರಗತಿಗಳನ್ನು ನಡೆಸುವುದು.
ದಿನನಿತ್ಯ ಹೆಚ್ಚುವರಿ ಅವಧಿ: ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ವಾರದ ಇತರ ದಿನಗಳಲ್ಲಿ ಸಂಜೆಯ ವೇಳೆಯಲ್ಲಿ ಒಂದು ಹೆಚ್ಚುವರಿ ಬೋಧನಾ ಅವಧಿ (ಪೀರಿಯಡ್) ನಡೆಸುವುದು.
ಶಾಲಾ ಹಂತದಲ್ಲಿ ನಿರ್ಧಾರ: ಪ್ರತಿ ಶಾಲೆಯು ತಮಗೆ ಅನ್ವಯಿಸಿದ ಮಳೆ ರಜೆಯ ಲೆಕ್ಕಾಚಾರ ಹಾಕಿ, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಎಸ್‌ಡಿಎಂಸಿ (SDMC) ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ ವೇಳಾಪಟ್ಟಿ ಸಿದ್ಧಪಡಿಸಿ ಬೋಧನಾ ದಿನಗಳನ್ನು ಸರಿದೂಗಿಸಲು ಡಿಡಿಪಿಐ (ಆಡಳಿತ) ಕಚೇರಿಯು ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಜ್ಞಾಪನಾ ಪತ್ರದ ಮೂಲಕ ಸೂಚನೆ ನೀಡಿದೆ.




