ಸೌಪರ್ಣಿಕಾ ನದಿ ದಂಡೆ ಕಾಮಗಾರಿಗೆ ಹೈಕೋರ್ಟ್ ಅಸ್ತು…
ಕುಂದಾಪುರ : ಪ್ರಸಿದ್ಧ ಮರವಂತೆ ಶ್ರೀ ಮಹಾರಾಜ ಸ್ವಾಮಿ ವರಾಹ ದೇವಸ್ಥಾನದ ಸಂಪರ್ಕ ರಸ್ತೆ ಹಾಗೂ ಸೌಪರ್ಣಿಕಾ ನದಿ ದಂಡೆ ರಕ್ಷಣಾ ಕಾಮಗಾರಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಇದರಿಂದಾಗಿ ಕಾಮಗಾರಿಗೆ ಎದುರಾಗಿದ್ದ ಬಹುದಿನಗಳ ಕಾನೂನು ತೊಡಕು ನಿವಾರಣೆಯಾದಂತಾಗಿದೆ.
ಸಣ್ಣ ನೀರಾವರಿ ಇಲಾಖೆ ಕೈಗೆತ್ತಿಕೊಂಡಿರುವ ಈ ಕಾಮಗಾರಿಯು ಪರಿಸರ ಹಾನಿ, ಕಾಂಡ್ಲಾವನ ನಾಶ ಮತ್ತು ಖಾಸಗಿ ಜಮೀನು ಅತಿಕ್ರಮಣಕ್ಕೆ ಕಾರಣವಾಗಿದೆ ಎಂದು ಆಕ್ಷೇಪಿಸಿ ಕುಂದಾಪುರದ ಪ್ಲಾಸಿಡ್ ಕ್ಲಿಂಟನ್ ವಾಸ್ ಎಂಬುವರು 2022ರಲ್ಲಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಆಕ್ಷೇಪಗಳನ್ನು ಬಲವಾಗಿ ತಳ್ಳಿಹಾಕಿದ ನ್ಯಾಯವಾದಿ ಪವನ್ ಚಂದ್ರ ಶೆಟ್ಟಿ ಅವರು, ಯೋಜನೆಯ ಸಮಗ್ರ ವಾಸ್ತವಾಂಶಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ನ್ಯಾಯಪೀಠದ ಗಮನಕ್ಕೆ ತಂದು ವಾದ ಮಂಡಿಸಿದರು.
ಹೈಕೋರ್ಟ್‌ನಲ್ಲಿ ನ್ಯಾಯವಾದಿ ಪವನ್ ಚಂದ್ರ ಶೆಟ್ಟಿ ಅವರ ಪ್ರಮುಖ ವಾದಗಳು: ಕುಂದಾಪುರ ಮತ್ತು ಬೈಂದೂರು ಕರಾವಳಿ ತೀರದ ಭೌಗೋಳಿಕ ಸ್ವರೂಪ ವಿಭಿನ್ನ ಹಾಗೂ ಸಂಕೀರ್ಣವಾಗಿದೆ. ನದಿ ಮತ್ತು ಸಮುದ್ರದ ಮಧ್ಯೆ ಅನಾದಿ ಕಾಲದಿಂದಲೂ ವಾಸಿಸುತ್ತಿರುವ ಸ್ಥಳೀಯ ಜನರಿಗೆ ಮೂಲಸೌಕರ್ಯ ಕಲ್ಪಿಸುವುದು ಸರ್ಕಾರದ ಕರ್ತವ್ಯ.
ಸ್ಥಳೀಯ ನಾಗರಿಕರಿಗೆ ಹಾಗೂ ಐತಿಹಾಸಿಕ ದೇವಸ್ಥಾನಕ್ಕೆ ಅಗತ್ಯ ಸಂಪರ್ಕ ರಸ್ತೆ ನಿರ್ಮಿಸುವುದು ಮತ್ತು ಪ್ರದೇಶದ ಸಮಗ್ರ ಅಭಿವೃದ್ಧಿ ಸಾಧಿಸುವುದು ಈ ಯೋಜನೆಯ ಮುಖ್ಯ ಉದ್ದೇಶ.
ಈ ಯೋಜನೆಯನ್ನು ವಿರೋಧಿಸುತ್ತಿರುವುದು ಸಾರ್ವಜನಿಕ ಕಾಳಜಿಯಿಂದಲ್ಲ; ಬದಲಾಗಿ ವೈಯಕ್ತಿಕ ದ್ವೇಷ ಹಾಗೂ ಹಠಮಾರಿ ಧೋರಣೆಯಿಂದ ಕೂಡಿದೆ. ಯೋಜನೆಯಲ್ಲಿ ಯಾವುದೇ ತಾಂತ್ರಿಕ ಲೋಪಗಳಾಗಲೀ, ಶಾಸನಬದ್ಧ ಅನುಮತಿಗಳ ಕೊರತೆಯಾಗಲೀ ಇಲ್ಲದಿರುವಾಗ, ಕೇವಲ ವ್ಯಕ್ತಿಗತ ಆಕ್ಷೇಪಗಳ ಆಧಾರದ ಮೇಲೆ ಇಂತಹ ಬೃಹತ್ ಸಾರ್ವಜನಿಕ ಯೋಜನೆಗೆ ತಡೆ ನೀಡಲಾಗದು.
ಪ್ರವಾಹ ನಿಯಂತ್ರಣ ಮತ್ತು ಸುರಕ್ಷತೆ: ಸೌಪರ್ಣಿಕಾ ನದಿಯ ಪ್ರವಾಹದಿಂದ ದಂಡೆಯನ್ನು ರಕ್ಷಿಸುವ ತಡೆಗೋಡೆ (Retaining Wall) ಹಾಗೂ ಸಂಪರ್ಕ ರಸ್ತೆ ನಿರ್ಮಾಣವು ಸಾರ್ವಜನಿಕರ ಜೀವ-ಮಾಲಿನ ಸುರಕ್ಷತೆಗೆ ಅತ್ಯಗತ್ಯ.
ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠವು, ನದಿ ದಂಡೆಯ ನೈಸರ್ಗಿಕ ಸಂರಕ್ಷಣೆ ಮತ್ತು ಭಕ್ತಾದಿಗಳ ಹಿತದೃಷ್ಟಿಯಿಂದ ಈ ಕಾಮಗಾರಿ ಅನಿವಾರ್ಯ ಎಂಬುದನ್ನು ಪರಿಗಣಿಸಿ ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿದೆ.





