Home Crime ಕೋಟ : ಹಿರೇ ಹೊಳೆಗೆ ಈಜಲು ತೆರಳಿದ್ದ ಕಾಲೇಜು ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ನಾಪತ್ತೆ…!!

ಕೋಟ : ಹಿರೇ ಹೊಳೆಗೆ ಈಜಲು ತೆರಳಿದ್ದ ಕಾಲೇಜು ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ನಾಪತ್ತೆ…!!

ಕೋಟ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೇಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಮ್ತಾಡಿಯ ಸುಳಿಗುಂಡಿ ಹಿರೇಹೊಳೆಗೆ ಈಜಲು ತೆರಳಿದ್ದ ಕಾಲೇಜು ವಿದ್ಯಾರ್ಥಿಯೊಬ್ಬ ಕಾಲುಜಾರಿ ನೀರಿನಲ್ಲಿ ಮುಳುಗಿ ನಾಪತ್ತೆಯಾದ ದಾರುಣ ಘಟನೆ ಜೂನ್ 13ರ ಶನಿವಾರ ಸಂಜೆ ನಡೆದಿದೆ.

ಗರಿಕೆಮಠ ನಿವಾಸಿಗಳಾದ ನಾಗರಾಜ್ ಹಾಗೂ ಶಿವಗಾಮಿ ದಂಪತಿಯ ಪುತ್ರ ಸಾಮರಾಜ್ (21) ನಾಪತ್ತೆಯಾದ ದುರ್ದೈವಿ ವಿದ್ಯಾರ್ಥಿ. ಈತ ಸ್ಥಳೀಯ ಇ.ಸಿ.ಆರ್. (ECR) ಕಾಲೇಜಿನ ಅಂತಿಮ ವರ್ಷದ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಶನಿವಾರ ಸಂಜೆ ಸಾಮರಾಜ್ ತನ್ನ ಕಾಲೇಜಿನ ಎಂಟು ಮಂದಿ ಸ್ನೇಹಿತರೊಂದಿಗೆ ಸೇರಿ ಬೇಳೂರು ಕೋಣಬಗೆ ರೈಲ್ವೆ ಬ್ರಿಡ್ಜ್ ನ ಕೆಳಗಡೆ ಇರುವ ಚಮ್ತಾಡಿಯ ಸುಳಿಗುಂಡಿ ಹಿರೇಹೊಳೆಗೆ ಈಜಲೆಂದು ತೆರಳಿದ್ದನು. ಈ ಸಂದರ್ಭದಲ್ಲಿ ಸಾಮರಾಜ್ ಸೇರಿದಂತೆ ನಾಲ್ವರು ಸ್ನೇಹಿತರು ನದಿಗೆ ಇಳಿಯಲು ಮುಂದಾಗಿದ್ದಾರೆ. ಆದರೆ ದುರದೃಷ್ಟವಶಾತ್ ನದಿಗೆ ಇಳಿಯುವಾಗ ಸಾಮರಾಜ್ ಕಾಲುಜಾರಿ ಆಳವಾದ ನೀರಿಗೆ ಬಿದ್ದಿದ್ದಾನೆ.
ಸಾಮರಾಜ್ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ತಕ್ಷಣ ಉಳಿದ ಸ್ನೇಹಿತರು ಆತನನ್ನು ರಕ್ಷಿಸಲು ತೀವ್ರ ಪ್ರಯತ್ನ ನಡೆಸಿದ್ದಾರೆ. ಆದರೆ ನೀರಿನ ರಭಸ ಹೆಚ್ಚಾಗಿದ್ದರಿಂದ ಸಾಮರಾಜ್ ಕ್ಷಣಾರ್ಧದಲ್ಲಿ ನೀರಿನ ಸೆಳವಿಗೆ ಸಿಲುಕಿ ಕೊಚ್ಚಿ ಹೋಗಿದ್ದಾನೆ.

ಕೋಟ ಪೊಲೀಸರು ಈ ಪ್ರಕರಣವನ್ನು ‌ತನಿಖೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.