ಮಂಗಳೂರು: ಲೈಸನ್ಸ್ ಇಲ್ಲದೆ ಬಸ್ ಚಲಾಯಿಸಿದ ವೇಳೆ ಸಂಭವಿಸಿದ ಅಪಘಾತ ಪ್ರಕರಣ ಸಂಬಂಧ ಮಂಗಳೂರಿನ ನ್ಯಾಯಾಲಯವು ಚಾಲಕ ಹಾಗೂ ಮಾಲಕನಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಶಿಕ್ಷೆಗೊಳಗಾದ ಚಾಲಕ ನಿಶಿತ್ ಶೆಟ್ಟಿ ಮತ್ತು ಮಾಲಕ ಪ್ರೀತಂ ದೇವೇಂದ್ರ ಕುಲಾಲ್ ಎಂದು ತಿಳಿದು ಬಂದಿದೆ.
ನಗರದ ಬೆಂದೂರ್‌ವೆಲ್ ಜಂಕ್ಷನ್ ಬಳಿ 2024ರ ಜು.10ರಂದು ಸುಂದರಿ (66) ಎಂಬವರು ಶಕ್ತಿನಗರಕ್ಕೆ ಹೋಗುವ ಬಸ್ಸನ್ನು ಹತ್ತಲು ರಸ್ತೆ ದಾಟುತ್ತಿದ್ದಾಗ ಕರಾವಳಿ ವೃತ್ತದ ಕಡೆಯಿಂದ ಸ್ಟೇಟ್ ಬ್ಯಾಂಕ್ ಕಡೆಗೆ ಚಲಿಸುತ್ತಿದ್ದ ಬಸ್ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.
ಘಟನೆಯಿಂದ ರಸ್ತೆಗೆ ಬಿದ್ದ ಸುಂದರಿಯ ಬಲಕಾಲಿನ ಮೇಲೆ ಬಸ್ ಹರಿಯಿತು. ಈ ಕುರಿತು ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರು ತನಿಖೆ ನಡೆಸಿದಾಗ ಆರೋಪಿ ಚಾಲಕ ನಿಶಿತ್ ಶೆಟ್ಟಿಗೆ ಲೈಸನ್ಸ್ ಇಲ್ಲದಿರುವುದು ಬೆಳಕಿಗೆ ಬಂತು. ಅಪಘಾತದ ಬಗ್ಗೆ ಸಂಚಾರ ಪೂರ್ವ ಪೊಲೀಸ್ ಠಾಣೆಯ ಅಂದಿನ ಹೆಡ್ ಕಾನ್‌ಸ್ಟೆಬಲ್ ಲಕ್ಷ್ಮಿಕಾಂತ್ ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪಣಾ ಪಟ್ಟಿಯಲ್ಲಿ ಇದನ್ನು ಉಲ್ಲೇಖಿಸಿದ್ದರು ಎಂದು ತಿಳಿದು ಬಂದಿದೆ.
ವಿಚಾರಣೆ ನಡೆಸಿದ ಮಂಗಳೂರು ಜೆಎಂಎಫ್‌ಸಿ 8ನೇ ನ್ಯಾಯಾಲಯದ ನ್ಯಾಯಾಧೀಶೆ ಮೋನಿಷ ಆರ್. ಆರೋಪಿ ಬಸ್ ಚಾಲಕ ನಿಶಿತ್ ಶೆಟ್ಟಿಗೆ ಲೈಸನ್ಸ್ ಇಲ್ಲದೆ ಬಸ್ಸು ಚಲಾಯಿಸಿದ್ದಕ್ಕೆ 1 ತಿಂಗಳ ಸಾದಾ ಜೈಲು ಶಿಕ್ಷೆ ಹಾಗೂ 5,000 ರೂ. ದಂಡ ಮತ್ತು ಲೈಸನ್ಸ್ ಇಲ್ಲದೆ ಬಸ್ಸನ್ನು ಚಾಲಾಯಿಸಲು ಅವಕಾಶ ನೀಡಿದ್ದಕ್ಕೆ ಬಸ್ ಮಾಲಕ ಪ್ರೀತಮ್ ದೇವೇಂದ್ರ ಕುಲಾಲ್ ಗೆ 1 ತಿಂಗಳ ಸಾದಾ ಜೈಲು ಶಿಕ್ಷೆ ಹಾಗೂ 5,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ ಎಂದು ತಿಳಿದು ಬಂದಿದೆ.




