Home Latest ರಂಗಭೂಮಿ ಉಡುಪಿ ವತಿಯಿಂದ ವಂದೇ ಮಾತರಂ 150 ನೇ ಸಂಭ್ರಮಾಚರಣೆ..!!

ರಂಗಭೂಮಿ ಉಡುಪಿ ವತಿಯಿಂದ ವಂದೇ ಮಾತರಂ 150 ನೇ ಸಂಭ್ರಮಾಚರಣೆ..!!

ಉಡುಪಿ : ವಂದೇ ಮಾತರಂ ದೇಶದಲ್ಲಿ ನಡೆದು ಬಂದ ಕ್ಷಣಗಳನ್ನು ನೆನಪಿಸಿಕೊಂಡರೆ ರೋಮಾಂಚನವಾಗುತ್ತದೆ. ವಂದೇ ಮಾತರಂ ಗೆ ರಾಷ್ಟ್ರಗೀತೆ ಸಮನಾದ ಪ್ರಾಮುಖ್ಯತೆ ಸಿಕ್ಕಿರುವುದು ಸಂತೋಷ ತರೋ ವಿಚಾರ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಬುಧವಾರ ಎಂಜಿಎಂ ಕಾಲೇಜಿನ ಮುದ್ದಣ್ಣ ಮಂಟಪದಲ್ಲಿ ರಂಗಭೂಮಿ ಉಡುಪಿ ವತಿಯಿಂದ ಎಂಜಿಎಂ ಕಾಲೇಜು ಹಾಗೂ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಸಹಕಾರದಲ್ಲಿ ವಂದೇ ಮಾತರಂನ 150 ರ ಸಂಭ್ರಮಾಚರಣೆ ಸಂದರ್ಭದಲ್ಲಿ ಕವಿ ಚಕ್ರವರ್ತಿ ಕಾಳಿದಾಸ ಜಯಂತಿ ಮೂಲಕ ಹಮ್ಮಿಕೊಂಡ ಯುವ ರಂಗೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ಸಂಪೂರ್ಣ ದೇಶ ವಂದೇ ಮಾತರಂಗೆ ತೆರೆದು ಕೊಂಡಿದೆ. ಕೆಲವೊಂದು ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹಾಡಬಾರದು ಎಂಬ ಬಗ್ಗೆ ಚರ್ಚೆ ಕೂಡ ನಡೆದಿತ್ತು. ಇದೀಗ ದೇಶಾದ್ಯಂತ ಸುಮಾರು 20 ಲಕ್ಷ ಮಂದಿ ಸೇರುವ 4,000 ಕಲಾವಿದರ ಭಾಗವಹಿಸುವಿಕೆಯಲ್ಲಿ ಈ ಕಾರ್ಯಕ್ರಮ ಏಕಕಾಲದಲ್ಲಿ ನಡೆಯುತ್ತಿದೆ ಎಂದ ಅವರು ಉಡುಪಿಗೆ ಈ ಕಾರ್ಯಕ್ರಮವನ್ನು ತಂದ ರಂಗಭೂಮಿಗೆ ಅಭಿನಂದನೆಯನ್ನು ಸಲ್ಲಿಸಿದರು.

ಮಣಿಪಾಲ ಮಾಹೆಯ ಸಹಕುಲಾದಿಪತಿ, ಡಾ. ಎಚ್.ಎಸ್. ಬಲ್ಲಾಳ್ ಮಾತನಾಡಿ ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ, ಕಲೆಯ ಬಗ್ಗೆ ಅರಿವು ಮೂಡಿಸಲು ರಂಗಭೂಮಿ ಉಡುಪಿ ಸಂಸ್ಥೆ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರ ನೇತೃತ್ವದಲ್ಲಿ ಶ್ರಮಿಸುತ್ತಿರುವುದು ಹೆಮ್ಮೆಯ ವಿಷಯ. ಇದು ಇಂದಿನ ಅಗತ್ಯತೆಯಾಗಿದೆ ಎಂದರು.

ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಪೂರ್ ಮಾತನಾಡಿ ವಂದೇ ಮಾತರಂ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೇಶವನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದರು.

ವಂದೇ ಮಾತರಂ ಬಗ್ಗೆ ಪ್ರೊ. ಪವನ್ ಕಿರಣ್ ಕೆರೆ ಮಾತನಾಡಿ
ಭಾರತೀಯ ರಂಗಭೂಮಿ ಮೂಲಕ ದೇಶಪ್ರೇಮ ಸಂಸ್ಕೃತಿ ಪ್ರೀತಿ ಬೆಸೆಯುವ ಸಲುವಾಗಿ ಭಾರತದಾದ್ಯಂತ 150 ರಂಗ ಪ್ರಯೋಗ ಆಯೋಜನೆಗೊಂಡಿದೆ. ಭಾರತೀಯ ರಂಗಭೂಮಿ ಮತ್ತು ಸಾಹಿತ್ಯಕ್ಕೆ ಭಾರತೀಯ ದರ್ಶನ ಕಾಣಿಕೆ ನೀಡಿರುವ ಕಾಳಿದಾಸನ ಜಯಂತಿಯೂ ಇದರಲ್ಲಿ ಸೇರ್ಪಡೆಗೊಂಡಿದೆ. 39 ಕ್ಕೂ ಹೆಚ್ಚು ಭಾಷೆ ಉಪಭಾಷೆಗಳಲ್ಲಿ ರಂಗ ಸಾಧ್ಯತೆ ತೆರೆದುಕೊಳ್ಳಲಿದೆ. ಎಲ್ಲ ರಾಜ್ಯ ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡು ಒಂದು ದೇಶ ಒಂದು ಆಚರಣೆ ಎಂಬ ಭಾವೈಕ್ಯ ಸಾರಲು ಈ ರಂಗಮಹೋತ್ಸವ ಸಜ್ಜಾ ಗಿದೆ. 4 ಸಾವಿರ ರಂಗಕರ್ಮಿಗಳು ಪಾಲ್ಗೊಳ್ಳುತ್ತಿರುವ ಈ ಮಹೋತ್ಸವದಲ್ಲಿ ದೇಶಾದ್ಯಂತ 150 ಕ್ಕೂ ಹೆಚ್ಚು ಸಂಸ್ಥೆಗಳು ಇದರ ಸಹಭಾಗಿತ್ವ ತೆಗೆದುಕೊಂಡಿವೆ ಎಂದರು.

ಈ ಸಂದರ್ಭದಲ್ಲಿ ಮಹಾಕವಿ ಕಾಳಿದಾಸ ಜಯಂತಿ ಬಗ್ಗೆ ಶಾರದಾ ರೆಸಿಡೆನ್ಸಿಯಲ್ ಸ್ಕೂಲ್ ನ ನಿರ್ದೇಶಕ ವಿದ್ಯಾವಂತ ಆಚಾರ್ಯ ಹಾಗೂ ಚಿಂತಕ ಪ್ರಭಾಕರ್ ಜಿ.ಪಿ. ಮಾತನಾಡಿದರು.

ಸಮಾರಂಭದಲ್ಲಿ ಜಿಲ್ಲೆಯ ಶಾಸಕರುಗಳಾದ ಯಶಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಡಿ, ಗುರುರಾಜ ಗಂಟಿಹೊಳೆ, ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬೀ.ವಿಜಯ ಬಲ್ಲಾಳ, ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ , ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ತುಳುಕೂಟ ಉಡುಪಿ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಮಾಹೆಯ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಕಾರ್ಯದರ್ಶಿ ನಾರಾಯಣ ಸಭಾಹಿತ್, ಎಂಜಿಎಂ ಕಾಲೇಜಿನ ಪ್ರಾಂಶುಪಾಲರುಗಳಾದ ಡಾ. ಗಾಯತ್ರಿ ಗಿರಿಧರ್ ಪೈ , ಡಾ. ದೇವಿದಾಸ ನಾಯಕ್, ಡಾ.ವಿಶ್ವನಾಥ ಪೈ , ಡಾ. ಮಾಲತಿ ದೇವಿ , ರಂಗಭೂಮಿಯ ಪದಾಧಿಕಾರಿಗಳು, ಜಿಲ್ಲೆಯ ರಂಗ ತಂಡಗಳ, ವಿವಿಧ ಸಂಸ್ಥೆಯ ಮುಖ್ಯಸ್ಥರು ಉಪಸ್ಥಿತರಿದ್ದರು.

ಲೇಖಕಿ ಪೂರ್ಣಿಮಾ ಸುರೇಶ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳಿಂದ ಯುವ ರಂಗೋತ್ಸವ ಕಾರ್ಯಕ್ರಮದಡಿ ಸ್ವಾತಂತ್ರ್ಯ ಶರದಿ ನಾಟಕ ಪ್ರಸ್ತುತಗೊಂಡಿತು.