ಕೋಟ : ಉಡುಪಿಯ ಪ್ರತಿಷ್ಠಿತ ಪರಿವಾರ್ ಬೇಕರಿ ಗ್ರೂಫ್ಸ್‌ನ ಸ್ಥಾಪಕರು, ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಮಾಜಿ ಅಧ್ಯಕ್ಷ, ಕಿನ್ನಿಮುಲ್ಕಿ ನಿವಾಸಿ ಕೆ. ಗೋಪಾಲ (86) ಅನಾರೋಗ್ಯದಿಂದ ಜ.19ರಂದು ನಿಧನ ಹೊಂದಿದರು.
ಮೃತರು ಪತ್ನಿ ಹಾಗೂ ಪುತ್ರರಾದ ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಪ್ರಸ್ತುತ ಅಧ್ಯಕ್ಷ ಉದಯ ಕೆ.
ಹಾಗೂ ಬಾರ್ಕೂರು ವೇಣುಗೋಪಾಲ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ವಿಜಯ ಕೆ. ಮತ್ತು
ಪುತ್ರಿಯನ್ನು ಅಗಲಿದ್ದಾರೆ.
ಇವರು ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷರಾಗಿ 24ವರ್ಷ ಸೇವೆ ಸಲ್ಲಿಸಿ ಸಮಾಜವನ್ನು ಸಂಘಟಿಸುವುದರ ಜತೆಗೆ ಬಾರ್ಕೂರಿನಲ್ಲಿರುವ ಗಾಣಿಗ ಸಮಾಜದ ಕುಲದೇವರಾದ ವೇಣುಗೋಪಾಲಕೃಷ್ಣ ದೇಗುಲವನ್ನು ಸಮಗ್ರವಾಗಿ ಪುನಃ ನಿರ್ಮಾಣ ಮಾಡುವಲ್ಲಿ ಸೇವೆ ಸಲ್ಲಿಸಿದ್ದರು. ದೇಗುಲವನ್ನು ವಿವಿಧ ಹಂತದಲ್ಲಿ ಜೀರ್ಣೋದ್ದಾರಗೊಳಿಸುವಿಕೆ, ಸುತ್ತು ಪೌಳಿ, ಸ್ವಾಗತ ಗೋಪುರ, ರಾಜಗೋಪುರ ನಿರ್ಮಾಣ,ಬ್ರಹ್ಮಕಲಶೋತ್ಸವ, ನಾಗಮಂಡಲೋತ್ಸವ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ‍್ಯ ಕೈಗೊಂಡಿದ್ದರು.
ಸಮಾಜದ ಸಂಘಟನೆಗೆ ಪೂರಕವಾಗಿ ವೇಣುಗೋಪಾಲಕೃಷ್ಣ ಎಜುಕೇಶನ್ ಸೊಸೈಟಿ ಸ್ಥಾಪನೆ, ಅಶಕ್ತ ಯಕ್ಷಗಾನ ಕಲಾವಿದರಿಗೆ ಯಕ್ಷನಿಧಿ ಸ್ಥಾಪನೆ, ಯುವ ಸಂಘಟನೆಗಳ ಸ್ಥಾಪನೆ, ವಲಯಗಳ ರಚನೆ,ಅನ್ನಪೂರ್ಣೇಶ್ವರಿ ಮಹಿಳಾ ಬಳಗ ಸ್ಥಾಪನೆ, ಸಂಪರ್ಕ ಸುಧಾ ಪತ್ರಿಕೆ ಬೆಳವಣಿಗೆಗೆ ಸಹಕಾರ ಸೇರಿದಂತೆ ಗಾಣಿಗ ಸಮಾಜ ಹಾಗೂ ಕುಲದೇವರಾದ ವೇಣುಗೋಪಾಲಕೃಷ್ಣ ದೇಗುಲದ ಅಭಿವೃದ್ಧಿಗೆ ಸಮಗ್ರವಾಗಿತೊಡಗಿಸಿಕೊಂಡಿದ್ದರು. ಜತೆಗೆ ಪರಿವಾರ್ ಗ್ರೂಫ್ಸ್ ಹಾಗೂ ಕೆನರಾ ರೆಪ್ರಿಜೀಷನ್ ಸಂಸ್ಥೆ ಕಟ್ಟಿಬೆಳೆಸುವಲ್ಲಿ ತನ್ನ ಕೊಡುಗೆಯನ್ನು ನೀಡಿದ್ದರು.



