Home Crime ಮನೆಗೆ ಬೆಂಕಿ : ಉಸಿರುಗಟ್ಟಿ ಮಂಗಳೂರು ಮೂಲದ ಮಹಿಳಾ ಟೆಕ್ಕಿ ಸಾವು

ಮನೆಗೆ ಬೆಂಕಿ : ಉಸಿರುಗಟ್ಟಿ ಮಂಗಳೂರು ಮೂಲದ ಮಹಿಳಾ ಟೆಕ್ಕಿ ಸಾವು

ಬೆಂಗಳೂರು: ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಉಂಟಾದ ದಟ್ಟವಾದ ಹೊಗೆಯಿಂದ ಮಂಗಳೂರು ಮೂಲದ ಮಹಿಳಾ ಟೆಕ್ಕಿ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸುಬ್ರಹಣ್ಯ ಲೇಔಟ್‌ನ ಅಪಾರ್ಟ್‌ಮೆಂಟ್‌ನಲ್ಲಿ ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ.

ಮಂಗಳೂರಿನ ಕಾವೂರು ಮೂಲದ ಶರ್ಮಿಳಾ (34) ಮೃತಪಟ್ಟವರು.

ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಶರ್ಮಿಳಾ ಒಂದೂವರೆ ವರ್ಷದಿಂದ ಇಲ್ಲಿ ಸ್ನೇಹಿತೆ ಜತೆ ವಾಸವಾಗಿದ್ದು, ಸಮೀಪದ ಸಾಫ್ಟ್‌ವೇರ್ ಕಂಪೆನಿಯಲ್ಲಿ ಕೆಲಸದಲ್ಲಿದ್ದರು.

ರಜೆಯಿದ್ದುದರಿಂದ ಈಕೆಯ ಸ್ನೇಹಿತೆ ಊರಿಗೆ ತೆರಳಿದ್ದರು. ಹೀಗಾಗಿ ಒಬ್ಬರೇ ಇದ್ದರು. ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ತಮ್ಮ ಮನೆಯ ಕೋಣೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ದಟ್ಟವಾದ ಹೊಗೆ ಆವರಿಸಿದೆ. ಆಗ ಪಕ್ಕದ ಕೋಣೆಯಲ್ಲಿದ್ದ ಶರ್ಮಿಳಾ ಕೂಡಲೇ ಆ ಕೋಣೆ ಕಡೆ ಬರಲು ಮುಂದಾಗಿದ್ದಾರೆ. ಅದೇ ವೇಳೆ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಕಿಟಕಿ ಹಾಗೂ ಬಾಗಿಲು ತೆರೆಯಲು ಸಾಧ್ಯವಾಗಿಲ್ಲ. ಮನೆಯ ತುಂಬೆಲ್ಲ ದಟ್ಟವಾದ ಹೊಗೆ ಆವರಿಸಿದ್ದ ಪರಿಣಾಮ ಉಸಿರುಗಟ್ಟಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ.