Home Crime ಕಂಟೈನರ್‌ ಟ್ರಕ್‌ಗೆ ಬಸ್‌ ಢಿಕ್ಕಿ : ಐವರು ಮಹಿಳೆಯರು ಸೇರಿ 6 ಮಂದಿ ಸ್ಥಳದಲ್ಲೇ ಸಾವು…!!

ಕಂಟೈನರ್‌ ಟ್ರಕ್‌ಗೆ ಬಸ್‌ ಢಿಕ್ಕಿ : ಐವರು ಮಹಿಳೆಯರು ಸೇರಿ 6 ಮಂದಿ ಸ್ಥಳದಲ್ಲೇ ಸಾವು…!!

ಸೂರ್ಯಪೇಟೆ: ಕಂಟೈನರ್‌ ಟ್ರಕ್‌ಗೆ ಖಾಸಗಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಐವರು ಮಹಿಳೆಯರು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದು, ಸುಮಾರು 12 ಮಂದಿ ಗಾಯಗೊಂಡಿರುವ ಘಟನೆ ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ನಡೆದಿದೆ.

ಹೈದರಾಬಾದ್‌–ವಿಜಯವಾಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗಿನ ಜಾವ ಸುಮಾರು 4.30ಕ್ಕೆ ಅಪಘಾತ ಸಂಭವಿಸಿದೆ. ಹೈದರಾಬಾದ್‌ನಿಂದ ಏಲೂರು ಮೂಲಕ ವಿಜಯವಾಡದತ್ತ ತೆರಳುತ್ತಿದ್ದ ಖಾಸಗಿ ಟ್ರಾವೆಲ್ಸ್‌ ಬಸ್‌, ಮುಂದೆ ಸಾಗುತ್ತಿದ್ದ ಕಂಟೈನರ್‌ ಟ್ರಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್‌ನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಅಪಘಾತದ ತೀವ್ರತೆಗೆ ಬಸ್‌ನಲ್ಲಿದ್ದ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ ಸುಮಾರು 12 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ವಿಜಯವಾಡಕ್ಕೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

42 ಮಂದಿ ಪ್ರಯಾಣ ಅಪಘಾತ ಸಂಭವಿಸಿದ ವೇಳೆ ಬಸ್‌ನಲ್ಲಿ ಸುಮಾರು 42 ಮಂದಿ ಪ್ರಯಾಣಿಸುತ್ತಿದ್ದರು ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.ಪೊಲೀಸರ ಪ್ರಕಾರ, ಬಸ್‌ ಡಿಕ್ಕಿ ಹೊಡೆಯುವ ಮುನ್ನವೇ ಕಂಟೈನರ್‌ ಟ್ರಕ್‌ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಮುಖ್ಯಮಂತ್ರಿ ಸಂತಾಪ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿರುವುದಕ್ಕೆ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್‌ ರೆಡ್ಡಿ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ ಅವರು ಆಳವಾದ ಸಂತಾಪ ವ್ಯಕ್ತಪಡಿಸಿದ್ದಾರೆ.

ಗಾಯಾಳುಗಳಿಗೆ ಅಗತ್ಯವಿರುವ ಉತ್ತಮ ವೈದ್ಯಕೀಯ ಚಿಕಿತ್ಸೆ ಒದಗಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.