ಮಲ್ಪೆ: ಯಾವುದೇ ಪರವಾನಿಗೆ ಇಲ್ಲದೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ಆರೋಪದಡಿ ವ್ಯಕ್ತಿಯೊಬ್ಬರನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.
ಆಹಾರ ಇಲಾಖೆಗೆ ಬಂದ ಖಚಿತ ಮಾಹಿತಿಯ ಮೇರೆಗೆ ಆಹಾರ ಶಿರಸ್ತೇದಾರರಾದ ಆಶಾ ಕೆ. ಹಾಗೂ ಆಹಾರ ನಿರೀಕ್ಷಕ ಹಿತೇಶ್ ಯು.ಬಿ. ಅವರ ನೇತೃತ್ವದಲ್ಲಿ, ಮಲ್ಪೆ ಪೊಲೀಸ್ ಠಾಣೆಯ ಪಿಎಸ್‌ಐ ಅನೀಲ್ ಕುಮಾರ್ ಮತ್ತು ಸಿಬ್ಬಂದಿ ಜೂನ್ 3ರಂದು ಬೆಳಿಗ್ಗೆ ಮಲ್ಪೆ ಜಂಕ್ಷನ್ ಸಮೀಪದ ಸನತ್ ಕಾಮತ್ ಅವರ ಮನೆ ಅಂಗಳಕ್ಕೆ ದಾಳಿ ನಡೆಸಿದರು.
ದಾಳಿಯ ವೇಳೆ 19 ಕೆ.ಜಿ. ಸಾಮರ್ಥ್ಯದ 12 ವಾಣಿಜ್ಯ ಸಿಲಿಂಡರ್‌ಗಳು ಹಾಗೂ 5 ಕೆ.ಜಿ. ಸಾಮರ್ಥ್ಯದ 9 ವಾಣಿಜ್ಯ ಸಿಲಿಂಡರ್‌ಗಳು ಸೇರಿದಂತೆ ಒಟ್ಟು 21 ಸಿಲಿಂಡರ್‌ಗಳು ಅಕ್ರಮವಾಗಿ ದಾಸ್ತಾನು ಮಾಡಿರುವುದು ಪತ್ತೆಯಾಗಿದೆ. ವಿಚಾರಣೆ ವೇಳೆ ಮೀನುಗಾರಿಕಾ ಉದ್ದೇಶಕ್ಕಾಗಿ ಬಳಸುವವರಿಗೆ ಮಾರಾಟ ಮಾಡಲು ಸಿಲಿಂಡರ್‌ಗಳನ್ನು ಸಂಗ್ರಹಿಸಿಟ್ಟಿರುವುದಾಗಿ ಹಾಗೂ ಇದಕ್ಕೆ ಸಂಬಂಧಿಸಿದ ಯಾವುದೇ ಪರವಾನಿಗೆ ಅಥವಾ ದಾಖಲೆಗಳಿಲ್ಲ ಎಂದು ಆರೋಪಿತ ತಿಳಿಸಿದ್ದಾನೆ ಎನ್ನಲಾಗಿದೆ.
ಆಹಾರ ಇಲಾಖೆಯ ಅಧಿಕಾರಿಗಳು ಸಿಲಿಂಡರ್‌ಗಳನ್ನು ಮಹಜರು ಮೂಲಕ ವಶಪಡಿಸಿಕೊಂಡು ನೀಡಿದ ದೂರಿನ ಮೇರೆಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಗತ್ಯ ವಸ್ತುಗಳ ಕಾಯ್ದೆ 1955ರ ಕಲಂ 3 ಮತ್ತು 7 ಹಾಗೂ ಎಲ್‌ಪಿಜಿ (ಸರಬರಾಜು ಮತ್ತು ವಿತರಣೆ ನಿಯಂತ್ರಣ) ಆದೇಶ 2000ರ ಕಲಂ 4 ಮತ್ತು 7ರಡಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ಆರೋಪಿತ ಸನತ್ ಆರ್. ಕಾಮತ್ (43) ಅವರನ್ನು ಅದೇ ದಿನ ರಾತ್ರಿ ಮಲ್ಪೆ ಜಂಕ್ಷನ್ ಬಳಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಅಕ್ರಮವಾಗಿ ಸಿಲಿಂಡರ್‌ಗಳನ್ನು ದಾಸ್ತಾನು ಮಾಡಿ ಮಾರಾಟ ಮಾಡುತ್ತಿರುವುದನ್ನು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಕ್ರಮ ಕೈಗೊಳ್ಳಲಾಗಿದೆ.




