Home Latest ಕಾರ್ಕಳ ಕಾಂಗ್ರೆಸ್ ವಿರುದ್ಧ ಕ್ರಮ ಕೈಗೊಳ್ಳಿ : ಉಡುಪಿ ಜಿಲ್ಲಾಧಿಕಾರಿಗೆ ಸಂಧ್ಯಾ ರಮೇಶ್ ಒತ್ತಾಯ…!!

ಕಾರ್ಕಳ ಕಾಂಗ್ರೆಸ್ ವಿರುದ್ಧ ಕ್ರಮ ಕೈಗೊಳ್ಳಿ : ಉಡುಪಿ ಜಿಲ್ಲಾಧಿಕಾರಿಗೆ ಸಂಧ್ಯಾ ರಮೇಶ್ ಒತ್ತಾಯ…!!

ಉಡುಪಿ: ಕಾರ್ಕಳದಲ್ಲಿ ಅ.8ರಂದು ನಡೆದಿದ್ದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಬಿಜೆಪಿ ಸಂಸದರು, ಶಾಸಕರು ಮತ್ತು ನಾಯಕರ ವಿರುದ್ಧ ವೈಯಕ್ತಿಕ ತೇಜೋವಧೆ ಮಾಡಲಾಗಿದೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಗೆ ನಿಯೋಗದೊಂದಿಗೆ ಶುಕ್ರವಾರ (ಅ.9) ಸಂಜೆ ತೆರಳಿ, ಸ್ವರೂಪಾ ಟಿ.ಕೆ. ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಅ.5ರಂದು ಕಾರ್ಕಳ ಶಾಸಕ ವಿ.ಸುನೀಲಕುಮಾರ್ ನೇತೃತ್ವದಲ್ಲಿ ಜಿಲ್ಲೆಯ ಸಂಸದರು, ಶಾಸಕರು, ಬಿಜೆಪಿ ನಾಯಕರ ಉಪಸ್ಥಿತಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಬೃಹತ್ ಪ್ರತಿಭಟನೆ ಮಾಡಲಾಗಿತ್ತು. ಅದಕ್ಕೆ ಪ್ರತಿಯಾಗಿ ಕಾರ್ಕಳ ಕಾಂಗ್ರೆಸ್ ವತಿಯಿಂದ ಅ.8ರಂದು ಪ್ರತಿಭಟನೆ ನಡೆಸಿ ಬಿಜೆಪಿ ಹಾಗೂ ನಾಯಕರ ವಿರುದ್ಧ ಕೀಳು ಮಟ್ಟದಲ್ಲಿ ಮತ್ತು ವೈಯಕ್ತಿಕ ನಿಂದನೆ ಮಾಡಿದ್ದಾರೆ. ಈ ರೀತಿ ತೇಜೋವಧೆ ಮಾಡಿರುವುದನ್ನು ಖಂಡಿಸುತ್ತೇವೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನ್ಯಾಯ ಸಮ್ಮತ ಪ್ರತಿಭಟನೆ, ಹೋರಾಟ ನಡೆಸಲು ಸಂವಿಧಾನ ಅವಕಾಶ ನೀಡಿದೆ. ಆದರೆ, ಯಾವುದೇ ರ್ನಿದಿಷ್ಟ ವಿಷಯ ಅಥವಾ ಬೇಡಿಕೆಗಳ ಚೌಕಟ್ಟು ಮತ್ತು ನಾಗರಿಕ ಸಮಾಜದ ಸಭ್ಯತೆ ಮೀರಿ ಕಾರ್ಕಳ ಕಾಂಗ್ರೆಸ್ ವರ್ತಿಸಿದೆ. ಪದೇಪದೆ ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಸಹಿತ ಸತ್ಯಕ್ಕೆ ದೂರವಾದ ಅಸಂಬದ್ಧ ವಿಚಾರಗಳನ್ನು ಹೇಳುತ್ತಿರುವುದು ಖಂಡನೀಯ ಅವರ ವಿರುದ್ಧ ಸ್ವಯಂ ಪ್ರೇರಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ, ಬಿಜೆಪಿ ಉಡುಪಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ನೀತಾ ಪ್ರಭು, ಕಾರ್ಯಕಾರಿಣಿ ಸದಸ್ಯೆ ಮಂಜುಳಾ ಪ್ರಸಾದ್ ಮಾತನಾಡಿದರು.

ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಷಾ ಪ್ರಕಾಶ್ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯೆಯರಾದ ಜ್ಯೋತಿ ಉದಯ ಪೂಜಾರಿ, ನಳಿನಿ ಪ್ರದೀಪ್ ರಾವ್, ಜಿಲ್ಲಾ ಕಾರ್ಯದರ್ಶಿ ಶೋಭಾ ಭಾಸ್ಕರ್, ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯೆಯರಾದ ಸುಜಾಲಾ ಸತೀಶ್, ಮಾಲಿನಿ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.