Home Crime ಬ್ರಹ್ಮಾವರ: ಸ್ವರ್ಣ ನದಿಯಲ್ಲಿ ಅಕ್ರಮ ಮರಳುಗಾರಿಕೆ – ದೋಣಿ ಹಾಗೂ ಮರಳು ವಶ, ಆರೋಪಿಗಳು ಪರಾರಿ..!!

ಬ್ರಹ್ಮಾವರ: ಸ್ವರ್ಣ ನದಿಯಲ್ಲಿ ಅಕ್ರಮ ಮರಳುಗಾರಿಕೆ – ದೋಣಿ ಹಾಗೂ ಮರಳು ವಶ, ಆರೋಪಿಗಳು ಪರಾರಿ..!!

ಬ್ರಹ್ಮಾವರ : ಉಪ್ಪೂರು ಗ್ರಾಮದ ಅಮ್ಮುಂಜೆ ಪ್ರದೇಶದಲ್ಲಿರುವ ಸ್ವರ್ಣ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿರುವ ಘಟನೆ ವರದಿಯಾಗಿದೆ.

ಫೆಬ್ರವರಿ 11ರಂದು ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಅಶೋಕ್ ಮಾಳಬಾಗಿ ಅವರು ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, ಸ್ವರ್ಣ ನದಿಯಲ್ಲಿ ದೋಣಿ ಬಳಸಿ ಮರಳನ್ನು ಕಳ್ಳತನ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ, ನದಿಯ ದಡದಲ್ಲಿದ್ದ ದೋಣಿಯಿಂದ ಮೂವರು ವ್ಯಕ್ತಿಗಳು ಚಾವಲ್ ಹಾಗೂ ಹಾರೆಯ ಸಹಾಯದಿಂದ ಮರಳನ್ನು ದಡಕ್ಕೆ ಅನ್ಲೋಡ್ ಮಾಡುತ್ತಿರುವುದು ಕಂಡುಬಂದಿದೆ.

ಪೊಲೀಸರು ವಿಚಾರಣೆ ನಡೆಸುವ ವೇಳೆ, ಅವರಲ್ಲಿ ಒಬ್ಬನು ಪ್ರಜ್ವಲ್ ಎಂದು ಗುರುತಿಸಿಕೊಂಡಿದ್ದು, ಪ್ರಜ್ವಲ್ ಹಾಗೂ ಇನ್ನಿಬ್ಬರು ಆರೋಪಿಗಳು ನದಿಯ ದಡದ ಪಕ್ಕದ ತೋಟದೊಳಗೆ ಓಡಿ ಪರಾರಿಯಾಗಿದ್ದಾರೆ.

ಸ್ಥಳದಿಂದ ನೀಲಿ-ಬಿಳಿ ಬಣ್ಣದ ಫೈಬರ್ ಕೋಟಿಂಗ್ ಇರುವ ಸುಮಾರು ಒಂದು ಯುನಿಟ್ ಮರಳು ಹಿಡಿಯುವ ದೋಣಿ, ಒಂದು ಯುನಿಟ್ ಮರಳು, ಮೂರು ಚಾವಲ್ ಹಾಗೂ ಒಂದು ಹಾರೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.