Home Crime ಶಂಕರನಾರಾಯಣ: ಹಾಲಾಡಿ ಬಳಿ ರಸ್ತೆ ಅಪಘಾತ : ಬೈಕ್ ಸವಾರ ಮೃತ್ಯು.!!

ಶಂಕರನಾರಾಯಣ: ಹಾಲಾಡಿ ಬಳಿ ರಸ್ತೆ ಅಪಘಾತ : ಬೈಕ್ ಸವಾರ ಮೃತ್ಯು.!!

ಕುಂದಾಪುರ : ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ.

ಸಿದ್ದಾಪುರ ಗ್ರಾಮದ ನಿವಾಸಿ ಗಣೇಶ್ ಕುಲಾಲ್ (37) ಅವರು ನೀಡಿದ ದೂರಿನ ಪ್ರಕಾರ, ಫೆಬ್ರವರಿ 11ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಸಿದ್ದಾಪುರ ಪೇಟೆಯಲ್ಲಿದ್ದ ವೇಳೆ ಪಕ್ಕದ ಮನೆಯ ರವಿ ಎಂಬವರು ಆವರ್ಸೆಗೆ ಬಾಡಿಗೆ ಹೋಗುವಂತೆ ಕರೆ ಮಾಡಿದ್ದಾರೆ. ಅದರಂತೆ ಗಣೇಶ್ ಕುಲಾಲ್ ಅವರು ತಮ್ಮ ಆಟೋರಿಕ್ಷಾದಲ್ಲಿ ಇಬ್ಬರು ಮಹಿಳೆಯರನ್ನು ಕುಳ್ಳಿರಿಸಿಕೊಂಡು ಹಾಲಾಡಿ–ಚೋರಾಡಿ ಮಾರ್ಗವಾಗಿ ಆವರ್ಸೆಗೆ ತೆರಳುತ್ತಿದ್ದರು.

ಮಧ್ಯಾಹ್ನ 3.45 ಗಂಟೆ ಸುಮಾರಿಗೆ ಹಾಲಾಡಿ ಗ್ರಾಮದ ಹಂದಕೊಡ್ಲು ಎಂಬಲ್ಲಿ ಹೋಗುತ್ತಿರುವಾಗ, ಕುಂಬಾರಮಕ್ಕಿ ನಿವಾಸಿ ಕಳಿಗೆ ಚಂದ್ರ ಶೆಟ್ಟಿ (63) ಎಂಬವರು ತಮ್ಮ KA-20-EK-5144 ಸಂಖ್ಯೆಯ ಮೋಟಾರ್ ಸೈಕಲನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಉರುಳಿದ್ದಾರೆ. ಈ ವೇಳೆ ಮೋಟಾರ್ ಸೈಕಲ್ ಪಿರ್ಯಾದಿದಾರರ ಆಟೋರಿಕ್ಷಾದ ಬಲಭಾಗದ ಸೇಫ್‌ಗೆ ಡಿಕ್ಕಿ ಹೊಡೆದಿದೆ.

ಅಪಘಾತದ ಪರಿಣಾಮ ಕಳಿಗೆ ಚಂದ್ರ ಶೆಟ್ಟಿ ಅವರ ಮುಖದಲ್ಲಿ ಗಂಭೀರ ಗಾಯಗಳಾಗಿ ಹೆಚ್ಚಿನ ರಕ್ತಸ್ರಾವವಾಗಿದ್ದು, ಮಾತನಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ಇದ್ದರು. ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಆಟೋರಿಕ್ಷಾ ಚಾಲಕ ಗಾಯಾಳುವನ್ನು ಉಪಚರಿಸಿ ಹಾಲಾಡಿ ದುರ್ಗಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆದರೆ ಆಸ್ಪತ್ರೆಗೆ ಸಾಗುವ ಮಾರ್ಗ ಮಧ್ಯದಲ್ಲೇ ಅವರು ಮೃತಪಟ್ಟಿದ್ದಾರೆ.

ಈ ಸಂಬಂಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 11/2026 ಕಲಂ 281 ಮತ್ತು 106 ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.