ಬೈಂದೂರು: ಉಪ್ಪುಂದ ಗ್ರಾಮದ ಮಯ್ಯರಕೇರಿ ಎಸ್‌ವಿಎಂಎಸ್ ಕಂಪೌಂಡ್ ಎದುರು ಸಂಭವಿಸಿದ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಊದಾನೇಶ್ವರ ಭಟ್ ಮೃತಪಟ್ಟಿದ್ದಾರೆ.
ಆಗಸ್ಟ್ 20ರಂದು ಬೆಳಗ್ಗೆ ಸುಮಾರು 9:30ಕ್ಕೆ ಘಟನೆ ನಡೆದಿದೆ. ಅತಿವೇಗ ಹಾಗೂ ಅಜಾಗರೂಕತೆಯಿಂದ ಬೈಕ್ ಚಲಾಯಿಸುತ್ತಿದ್ದ ವೇಳೆ ರಸ್ತೆಗೆ ಅಡ್ಡಬಂದ ನಾಯಿಯನ್ನು ತಪ್ಪಿಸಲು ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದೆ ಎನ್ನಲಾಗಿದೆ.
ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡ ಊದಾನೇಶ್ವರ ಭಟ್ ಅವರನ್ನು ಬೈಂದೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಕೆ.ಎಂ.ಸಿ. ಆಸ್ಪತ್ರೆ ಮಣಿಪಾಲಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ 12:43ಕ್ಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



