ಉಡುಪಿ: ಜಾಗ ಖರೀದಿಸುವ ಉದ್ದೇಶದಿಂದ ಉಡುಪಿಗೆ ಬಂದಿದ್ದ ಕೇರಳ ಮೂಲದ ಶ್ರುತಿ ವಿ. (37) ಎಂಬವರಿಗೆ ಸೈಬರ್ ವಂಚಕರು ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ₹4 ಲಕ್ಷ ವಂಚಿಸಿರುವ ಘಟನೆ ನಡೆದಿದೆ.
ಶ್ರುತಿ ಅವರು ಕಟಪಾಡಿಯ ರಮಾನಂದ ಶೆಟ್ಟಿ ಅವರಿಗೆ ಮೂರು ಚೆಕ್‌ಗಳನ್ನು ನೀಡಿದ್ದರು. ಈ ಚೆಕ್‌ಗಳನ್ನು ಪಾಸ್ ಮಾಡುವ ಕುರಿತು ಮಾಹಿತಿ ಪಡೆಯಲು ದಿನಾಂಕ 19-08-2026ರಂದು ಗೂಗಲ್ ಮೂಲಕ ಬ್ಯಾಂಕ್‌ನ ನಂಬರ್ ಹುಡುಕಿ, 08409615973ಕ್ಕೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿ ತಾನು ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ, ಲಿಂಕ್‌ವೊಂದನ್ನು ಕಳುಹಿಸಿ ಅದನ್ನು ಓಪನ್ ಮಾಡುವಂತೆ ತಿಳಿಸಿದ್ದಾನೆ.
ನಂತರ YONO APP ಮೂಲಕ ‘Proceed’ ಮಾಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಶ್ರುತಿ ಅವರು ₹4 ಲಕ್ಷದ ವಹಿವಾಟು ನಡೆಸಿದ್ದಾರೆ. ಬಳಿಕ ಅವರ ಬ್ಯಾಂಕ್ ಖಾತೆಯಿಂದ ₹4 ಲಕ್ಷ ಹಣ ವರ್ಗಾವಣೆಯಾಗಿರುವುದು ಗಮನಕ್ಕೆ ಬಂದಿದೆ.
ತಕ್ಷಣ ಎಸ್‌ಬಿಐ ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ಇದು ಆನ್‌ಲೈನ್ ವಂಚನೆ ಎಂದು ತಿಳಿದುಬಂದಿದೆ. ಸೈಬರ್ ವಂಚಕರು ಹಣ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



