ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರದ ಹಿರಿಯ ವೈದ್ಯರು, ಸಮಾಜಮುಖಿ ಚಿಂತಕರು ಹಾಗೂ ರಾಷ್ಟ್ರಚಿಂತನೆಯನ್ನೇ ಬದುಕಿನ ಧ್ಯೇಯವಾಗಿಸಿಕೊಂಡಿದ್ದ ಡಾ. ಎಸ್. ಎನ್. ಪಡಿಯಾರ್ (84) ಅವರ ನಿಧನಕ್ಕೆ ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆಯ ವತಿಯಿಂದ ತೀವ್ರ ಸಂತಾಪ ವ್ಯಕ್ತಪಡಿಸಲಾಗಿದೆ.
ಅರವತ್ತರ ದಶಕದಲ್ಲಿ ನಮ್ಮ ಸಮಾಜದ ಮೊದಲ ವೈದ್ಯರಾಗಿ ವೈದ್ಯಕೀಯ ಸೇವೆಗೆ ಕಾಲಿಟ್ಟ ಡಾ. ಪಡಿಯಾರ್ ಅವರು ಕುಂದಾಪುರದಲ್ಲಿ ಪ್ರಪ್ರಥಮ ಪಡಿಯಾರ್ ನರ್ಸಿಂಗ್ ಹೋಮ್ ಹಾಗೂ ಆ ಕಾಲದಲ್ಲೇ ಆ್ಯಂಬುಲೆನ್ಸ್ ಸೇವೆಯನ್ನು ಆರಂಭಿಸುವ ಮೂಲಕ ಈ ಭಾಗದ ವೈದ್ಯಕೀಯ ಕ್ಷೇತ್ರದ ಬೆಳವಣಿಗೆಗೆ ಭದ್ರ ಬುನಾದಿ ಹಾಕಿದವರು. ವೈದ್ಯಕೀಯ ವೃತ್ತಿಗಿಂತಲೂ ರಾಷ್ಟ್ರಚಿಂತನೆ, ಸಮಾಜಸೇವೆ ಹಾಗೂ ಸಂಘಟನಾ ಕಾರ್ಯಗಳತ್ತ ಹೆಚ್ಚಿನ ಒಲವು ಹೊಂದಿದ್ದ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ, ತಮ್ಮ ಜೀವನವನ್ನು ಸಮಾಜಕ್ಕೆ ಸಮರ್ಪಿಸಿದ್ದರು.
ಜಿಲ್ಲಾ ಶಿಶು ಮಂದಿರದ ಕನಸನ್ನು ನನಸಾಗಿಸುವಲ್ಲಿ ಅವರ ಕೊಡುಗೆ, ವಿಷ್ಣು ಸಹಸ್ರನಾಮದ ಮಹತ್ವವನ್ನು ಸಮಾಜದಲ್ಲಿ ಸಾರಿದ ಸೇವೆ ಹಾಗೂ ಸಾತ್ವಿಕ ಜೀವನಶೈಲಿ ಅವರ ವ್ಯಕ್ತಿತ್ವದ ವಿಶೇಷತೆಗಳಾಗಿದ್ದವು. ವೈಯಕ್ತಿಕ ಬದುಕಿನಲ್ಲಿ ಮಗನ ಅಗಲಿಕೆಯಂತಹ ದುಃಖವನ್ನು ಅನುಭವಿಸಿದರೂ, ಅದನ್ನು ಸಮಾಜಸೇವೆ ಮತ್ತು ರಾಷ್ಟ್ರಚಿಂತನೆಯ ಮೂಲಕ ಮರೆತು ಸಮಾಜಕ್ಕಾಗಿ ಬದುಕಿದ ಅವರು ನಾಡಿನ ಅಸಲಿ ಮಾಣಿಕ್ಯರಾಗಿದ್ದರು.
“ಪಡಿಯಾರ್ ಮಾಮ” ಎಂದು ಆತ್ಮೀಯವಾಗಿ ಕರೆಯಲ್ಪಡುತ್ತಿದ್ದ ಅವರ ಅಗಲಿಕೆಯಿಂದ ಶ್ರೇಷ್ಠ ಚಿಂತನೆಯ ಒಂದು ಮರವೇ ಧರೆಗುರುಳಿದಂತಾಗಿದೆ. ಸಜ್ಜನ, ಸಾತ್ವಿಕ ಹಾಗೂ ಸಮಾಜಮುಖಿ ಹಿರಿಯ ಚೇತನವೊಂದನ್ನು ನಾಡು ಕಳೆದುಕೊಂಡಿದೆ. ಅವರ ಆದರ್ಶ, ಸೇವೆ ಮತ್ತು ರಾಷ್ಟ್ರನಿಷ್ಠೆ ಸದಾ ಸ್ಮರಣೀಯ.
ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಾಗೂ ಕುಟುಂಬಸ್ಥರು, ಬಂಧು-ಮಿತ್ರರು ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ(ರಿ.) ಇದರ ಸಂಚಾಲಕರಾದ ಆರ್ ವಿವೇಕಾನಂದ ಶೆಣೈ, ಅಧ್ಯಕ್ಷರರಾದ ಜಿ ಸತೀಶ್ ಹೆಗ್ಡೆ ಕೋಟ, ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಹಾಗೂ ಕೇಶವ್ ಭಟ್ ಪ್ರಾರ್ಥಿಸಿದ್ದಾರೆ.




