Home Crime ಸಿಟಿ ಸೆಂಟರ್ ಕೆಎಫ್‌ಸಿಯಲ್ಲಿ ಕೊಳೆತ ಮಾಂಸ ಪತ್ತೆ : ಗೋದಾಮಿಗೆ ಬೀಗ ಜಡಿದ ಅಧಿಕಾರಿಗಳು…!!

ಸಿಟಿ ಸೆಂಟರ್ ಕೆಎಫ್‌ಸಿಯಲ್ಲಿ ಕೊಳೆತ ಮಾಂಸ ಪತ್ತೆ : ಗೋದಾಮಿಗೆ ಬೀಗ ಜಡಿದ ಅಧಿಕಾರಿಗಳು…!!

ಮಂಗಳೂರು: ನಗರದ ಕೆ.ಎಸ್. ರಾವ್ ರಸ್ತೆಯಲ್ಲಿರುವ ಸಿಟಿ ಸೆಂಟರ್ ಮಾಲ್‌ನ ಕೆಎಫ್‌ಸಿ (KFC) ಔಟ್‌ಲೆಟ್ ಮೇಲೆ ಆಹಾರ ಸುರಕ್ಷತೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಶನಿವಾರ ದಿಢೀರ್ ದಾಳಿ ನಡೆಸಿದ್ದಾರೆ.

ಆನ್‌ಲೈನ್ ಮೂಲಕ ತರಿಸಿಕೊಂಡ ಚಿಕನ್ ಪೆರಿ ಪೆರಿ ಲೆಗ್ಸ್ ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದ್ದು, ದುರ್ವಾಸನೆ ಬೀರುತ್ತಿದೆ ಎಂಬ ಗ್ರಾಹಕರ ಗಂಭೀರ ದೂರಿನ ಹಿನ್ನೆಲೆಯಲ್ಲಿ ಈ ಪರಿಶೀಲನೆ ನಡೆದಿದೆ.

ದಾಳಿಯ ವೇಳೆ ಅಧಿಕಾರಿಗಳ ತಂಡವು ಕೆಎಫ್‌ಸಿಯ ಅಡುಗೆ ಕೋಣೆ, ದಾಸ್ತಾನು ಕೊಠಡಿ, ಕೋಲ್ಡ್ ಸ್ಟೋರೇಜ್, ಡೀಪ್ ಫ್ರೀಜರ್ ಹಾಗೂ ಸಿದ್ಧಪಡಿಸಿದ ಫ್ರೈಡ್ ಚಿಕನ್ ಪದಾರ್ಥಗಳನ್ನು ಕೂಲಂಕಷವಾಗಿ ತಪಾಸಣೆ ನಡೆಸಿತು.

ಈ ಸಂದರ್ಭದಲ್ಲಿ ದೀರ್ಘಕಾಲದಿಂದ ಸಂಗ್ರಹಿಸಿಡಲಾಗಿದ್ದ ಕೊಳೆತ ಮಾಂಸ ಪತ್ತೆಯಾಗಿದ್ದು, ತಕ್ಷಣವೇ ಗೋದಾಮಿಗೆ ಬೀಗ ಜಡಿದು ಸೀಲ್ ಮಾಡಲಾಗಿದೆ.

ಅನುಮಾನಾಸ್ಪದ ಮಾಂಸ ಹಾಗೂ ಆಹಾರ ಪದಾರ್ಥಗಳ ಮಾದರಿಗಳನ್ನು (Samples) ವಶಕ್ಕೆ ಪಡೆದಿರುವ ಅಧಿಕಾರಿಗಳು, ಹೆಚ್ಚಿನ ವೈಜ್ಞಾನಿಕ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.

ವರದಿ ಬಂದ ಬಳಿಕ ಮುಂದಿನ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.