ಉಡುಪಿ: ಪರಿಶಿಷ್ಟ ಪಂಗಡಕ್ಕೆ ಸೇರಿದ ಮರಾಟಿ ಹಾಗೂ ಕೊಡಗು ಮರಾಠ ಸಮುದಾಯದ ಹಿತಾಸಕ್ತಿಗೆ ಧಕ್ಕೆಯಾಗುವ ಸಾಧ್ಯತೆಯಿರುವುದರಿಂದ ನವೆಂಬರ್ 22ರಂದು ಬೆಂಗಳೂರಿನಲ್ಲಿ ಆಯೋಜಿಸಿರುವ ‘ಪಶ್ಚಿಮ ಘಟ್ಟದ ತಪ್ಪಲಿನ ಬುಡಕಟ್ಟು ಮರಾಟಿ ಸಮುದಾಯದ ಸಮಾವೇಶ’ದಲ್ಲಿ ರಾಜ್ಯದ ಮರಾಟಿ ಸಮುದಾಯದವರು ಭಾಗವಹಿಸಬಾರದು ಎಂದು ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟದ ಅಧ್ಯಕ್ಷ ಡಾ. ಸುಂದರ ನಾಯ್ಕ್ ಮನವಿ ಮಾಡಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಮರಾಟಿ ಸಂಘ (ರಿ.), ಬೆಂಗಳೂರು ವತಿಯಿಂದ ವಿಜಯನಗರದ ಬಂಟ್ಸ್ ಭವನದಲ್ಲಿ ಆಯೋಜಿಸಿರುವ ಸಮಾವೇಶವು ಪರಿಶಿಷ್ಟ ಪಂಗಡಕ್ಕೆ ಸೇರಿದ ಮರಾಟಿ ಸಮುದಾಯದ ಸಮಾವೇಶವಾಗಿರದೆ, ಇತರ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿದ ಕುಡುಬಿ ಜನಾಂಗದವರನ್ನೂ ಒಳಗೊಂಡು ನಡೆಸಲಾಗುತ್ತಿದೆ.
ಹೀಗಾಗಿ ಈ ಸಮಾವೇಶಕ್ಕೂ ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು. ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯ (ತೀರ್ಥಹಳ್ಳಿ) ರಾಜ್ಯ ಮರಾಟಿ ಒಕ್ಕೂಟದ ಸಂಯೋಜಿತ ಮರಾಟಿ ಸೇವಾ ಸಂಘಗಳ ಸದಸ್ಯತ್ವ ಪಡೆದ ಸಂಘಗಳು ಈ ಸಮಾವೇಶದಲ್ಲಿ ಭಾಗಿಯಾಗಿಲ್ಲ. ಒಕ್ಕೂಟದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮಾವೇಶದಲ್ಲಿ ಭಾಗವಹಿಸದಂತೆ ನಿರ್ಣಯ ಕೈಗೊಳ್ಳಲಾಗಿದೆ. ಅದರಂತೆ ಒಕ್ಕೂಟದ ಆಡಳಿತ ಮಂಡಳಿ, ಕಾರ್ಯಕಾರಿ ಸಮಿತಿ, ಹಿರಿಯರ ಸಲಹಾ ಸಮಿತಿ ಸದಸ್ಯರು ಹಾಗೂ ರಾಜ್ಯದ ಎಲ್ಲ ಮರಾಟಿ ಸಂಘಗಳ ಪದಾಧಿಕಾರಿಗಳು ಮತ್ತು ಸದಸ್ಯರು ಸಮಾವೇಶದಿಂದ ದೂರ ಉಳಿಯಬೇಕು ಎಂದು ಮನವಿ ಮಾಡಿದರು.
ಕುಡುಬಿ ಜನಾಂಗದವರನ್ನು ಮರಾಟಿ ಸಮುದಾಯದೊಂದಿಗೆ ಗುರುತಿಸುವುದರಿಂದ ಪರಿಶಿಷ್ಟ ಪಂಗಡದ ಮರಾಟಿ ಮತ್ತು ಕೊಡಗು ಮರಾಠ ಸಮುದಾಯದವರಿಗೆ ಸರ್ಕಾರದಿಂದ ದೊರೆಯುವ ಮೀಸಲಾತಿ ಸೇರಿದಂತೆ ವಿವಿಧ ಸೌಲಭ್ಯಗಳ ಮೇಲೆ ದುಷ್ಪರಿಣಾಮ ಉಂಟಾಗುವ ಆತಂಕವಿದೆ. ಕುಡುಬಿ ಸಮುದಾಯದ ಕೆಲವರು ಪರಿಶಿಷ್ಟ ಪಂಗಡದ ಮರಾಟಿ ಹೆಸರಿನಲ್ಲಿ ನಕಲಿ ಜಾತಿ ದೃಢೀಕರಣ ಪತ್ರಗಳನ್ನು ಪಡೆದು ಸೌಲಭ್ಯಗಳನ್ನು ಪಡೆಯುತ್ತಿರುವ ಆರೋಪಗಳೂ ಇವೆ. ಈ ಕುರಿತು ಮುಂದಿನ ದಿನಗಳಲ್ಲಿ ಕಾನೂನಾತ್ಮಕ ಹೋರಾಟ ನಡೆಸಲು ಒಕ್ಕೂಟ ನಿರ್ಧರಿಸಿದೆ ಎಂದರು. ಕರ್ನಾಟಕ ಮರಾಟಿ ಸಂಘವು ರಾಜ್ಯ ಮರಾಟಿ ಒಕ್ಕೂಟದೊಂದಿಗೆ ಯಾವುದೇ ಪೂರ್ವಭಾವಿ ಚರ್ಚೆ ನಡೆಸದೆ ಸಮಾವೇಶದ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಿ ವಿತರಿಸುತ್ತಿರುವುದು ಹಾಗೂ ದೇಣಿಗೆ ಸಂಗ್ರಹಿಸುತ್ತಿರುವುದು ಸರಿಯಾದ ಕ್ರಮವಲ್ಲ.
ಒಕ್ಕೂಟದ ಹಿಂದಿನ ಸಭೆಗಳಲ್ಲಿ ಕೈಗೊಂಡ ನಿರ್ಣಯಗಳು ಹಾಗೂ ನೀಡಿದ ಸಲಹೆ, ಸೂಚನೆ ಮತ್ತು ಮಾರ್ಗದರ್ಶನಗಳನ್ನು ನಿರ್ಲಕ್ಷಿಸಿ ಸಮಾವೇಶ ನಡೆಸಲು ಮುಂದಾಗಿರುವುದು ವಿಷಾದನೀಯ. ಇದರಿಂದ ಮುಂದಿನ ದಿನಗಳಲ್ಲಿ ಮರಾಟಿ ಸಮುದಾಯಕ್ಕೆ ಎದುರಾಗಬಹುದಾದ ಪರಿಣಾಮಗಳ ಬಗ್ಗೆ ಆಯೋಜಕರು ಗಂಭೀರವಾಗಿ ಚಿಂತಿಸಬೇಕಿತ್ತು ಎಂದು ಹೇಳಿದರು. ಸಮುದಾಯದ ಹಿತಾಸಕ್ತಿ ಮತ್ತು ಪರಿಶಿಷ್ಟ ಪಂಗಡದ ಹಕ್ಕುಗಳ ರಕ್ಷಣೆಯ ದೃಷ್ಟಿಯಿಂದ ನ. 22ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾವೇಶದಲ್ಲಿ ಯಾರೂ ಭಾಗವಹಿಸಬಾರದು ಎಂದು ಅವರು ರಾಜ್ಯದ ಮರಾಟಿ ಹಾಗೂ ಕೊಡಗು ಮರಾಠ ಸಮಾಜ ಬಾಂಧವರಲ್ಲಿ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಅನಂತ ಎಸ್. ನಾಯ್ಕ್, ನರಸಿಂಹ ನಾಯ್ಕ್, ಕೆ.ಟಿ ನಾಯ್ಕ್, ವಾಸು ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.



