Home Karavali Karnataka ನಾಳೆ ಶೀರೂರು ಶ್ರೀಗಳ ಪುರಪ್ರವೇಶ : ಶೋಭಯಾತ್ರೆ…!!

ನಾಳೆ ಶೀರೂರು ಶ್ರೀಗಳ ಪುರಪ್ರವೇಶ : ಶೋಭಯಾತ್ರೆ…!!

ಉಡುಪಿ: ಜ.18ರಂದು ನಡೆಯುವ ಶೀರೂರು ಪರ್ಯಾಯದಲ್ಲಿ ಮೊದಲ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಲಿರುವ ಶೀರೂರು ಮಠದ ಶ್ರೀವೇದವರ್ಧನ ತೀರ್ಥ ಶ್ರೀಪಾದರು ದೇಶಾದ್ಯಂತ ಧಾರ್ಮಿಕ ಕ್ಷೇತ್ರಗಳ ಪರ್ಯಟನದ ಬಳಿಕ ಜ.9ರಂದು ಉಡುಪಿಗೆ ಆಗಮಿಸಲಿದ್ದು, ಅಪರಾಹ್ನ 3:00ಗಂಟೆಗೆ ಕಡಿಯಾಳಿ ಮೂಲಕ ಪುರಪ್ರವೇಶ ಮಾಡಲಿದ್ದಾರೆ ಎಂದು ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷ ಯಶಪಾಲ್‌ ಸುವರ್ಣ ತಿಳಿಸಿದ್ದಾರೆ.

ಶೀರೂರು ಮಠದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಪುರಪ್ರವೇಶ, ಶೋಭಾಯಾತ್ರೆ, ಹಸಿರು ಹೊರೆಕಾಣಿಕೆ ಕುರಿತು ಮಾಹಿತಿ ನೀಡಿದ ಅವರು, ಶೀರೂರು ಶ್ರೀಗಳು ಪರ್ಯಟನ ಬಳಿಕ ಶೀರೂರು ಮೂಲಮಠಕ್ಕೆ ಆಗಮಿಸಲಿದ್ದು, ಅಲ್ಲಿಂದ ಪಟ್ಟದ ದೇವರ ಸಮೇತ ಕಡಿಯಾಳಿಗೆ ಆಗಮಿಸಿ, ಅಲ್ಲಿ ಶ್ರೀಮಹಿಷಮರ್ದಿನಿ ದೇವರ ದರ್ಶನದ ಬಳಿಕ ಭವ್ಯ ಶೋಭಾ ಯಾತ್ರೆಯಲ್ಲಿ ಪುರಪ್ರವೇಶ ಮಾಡಲಿದ್ದಾರೆ ಎಂದರು.

ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಶ್ರೀಗಳನ್ನು ಸ್ವಾಗತಿಸಿ, ಶೋಭಾ ಯಾತ್ರೆಯಲ್ಲಿ ಕರೆತರಲಾಗುವುದು. ಪುರಮೆರವಣಿಗೆ ಯಲ್ಲಿ ಸುಮಾರು ಐದು ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಪುರಪ್ರವೇಶ ಮೆರವಣಿಗೆಯ ಸಂಚಾಲಕ ಗಣೇಶ್ ರಾವ್ ಮಾತನಾಡಿ, ಪುರಪ್ರವೇಶ ಮೆರವಣಿಗೆ ಕಡಿಯಾಳಿಯಿಂದ ಹೊರಟು ಸಿಟಿಬಸ್ ಸ್ಟಾಂಡ್ ಹನುಮಾನ್ ವೃತ್ತ ಕನಕದಾಸ ರಸ್ತೆ ಮೂಲಕ ಕೃಷ್ಣ ಮಠ ತಲುಪಲಿದೆ. 1000ಕ್ಕೂ ಅಧಿಕ ಭಜಕರು, ಉಡುಪಿಯ ಸ್ಥಳೀಯ ಜಾನಪದ ತಂಡಗಳು, ವಿವಿಧ ಕಲಾತಂಡ, ಸಾಂಸ್ಕೃತಿಕ ತಂಡಗಳು ಹಾಗೂ ವಿಶೇಷ ಟ್ಯಾಬ್ಲೊಗಳು ಮೆರವಣಿಗೆಗೆ ಮೆರುಗು ನೀಡಲಿವೆ ಎಂದರು.

ಶೀರೂರು ಶ್ರೀಗಳು ರಥಬೀದಿಯಲ್ಲಿ ಕನಕನ ಕಿಂಡಿ ಮೂಲಕ ಶ್ರೀಕೃಷ್ಣ ದರ್ಶನ ಪಡೆದ ಬಳಿಕ ವಿವಿಧ ದೇವರ ದರ್ಶನ ಪಡೆಯಲಿದ್ದಾರೆ. ಸಂಜೆ ರಥಬೀದಿಯಲ್ಲಿ ಹಾಕಲಾಗುವ ವೇದಿಕೆಯಲ್ಲಿ ಉಡುಪಿ ನಗರಸಭೆಯ ವತಿಯಿಂದ ಪೌರ ಸಮ್ಮಾನವನ್ನು ಸ್ವೀಕರಿಸುವರು. ಇದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸೇರಿದಂತೆ ಗಣ್ಯರು ಉಪಸ್ಥಿತರಿರುವರು. ಶಾಸಕ ಯಶಪಾಲ್ ಸುವರ್ಣ ಅಧ್ಯಕ್ಷತೆ ವಹಿಸುವರು ಎಂದರು.

ಇದೇ ವೇದಿಕೆಯಲ್ಲಿ ಜ.9 ಶುಕ್ರವಾರದಿಂದ 17ರ ಶನಿವಾರದವರೆಗೆ ಪ್ರತಿದಿನ ಸಂಜೆ ಹೆಸರಾಂತ ಸಾಂಸ್ಕೃತಿಕ ತಂಡಗಳಿಂದ, ಖ್ಯಾತನಾಮ ಕಲಾವಿ ದರಿಂದ ವಿವಿಧ ಕಾರ್ಯಕ್ರಮಗಳು ಪ್ರಸ್ತುತಗೊಳ್ಳಲಿವೆ.