Home Karavali Karnataka ಉಡುಪಿ ಶ್ರೀ ಕೃಷ್ಣನಿಗೆ ಚಿನ್ನದ ಭಗವದ್ಗೀತೆ ಅರ್ಪಣೆ…!!

ಉಡುಪಿ ಶ್ರೀ ಕೃಷ್ಣನಿಗೆ ಚಿನ್ನದ ಭಗವದ್ಗೀತೆ ಅರ್ಪಣೆ…!!

ಉಡುಪಿ : ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಪರ್ಯಾಯದ ಮಂಗಳೋತ್ಸವದ ಸಂದರ್ಭದಲ್ಲಿ ದೆಹಲಿಯ ನಿವೃತ್ತ ಐಎಎಸ್ ಅಧಿಕಾರಿ ಎಸ್. ಲಕ್ಷ್ಮೀನಾರಾಯಣನ್ ಅವರು 2 ಕೋಟಿ ರೂಪಾಯಿ ವೆಚ್ಚದಲ್ಲಿ ರಚಿಸಿರುವ ಚಿನ್ನದ ಭಗವದ್ಗೀತೆಯ ಕೃಷ್ಣಾರ್ಪಣಾ ಕಾರ್ಯಕ್ರಮವು ಗುರುವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಿತು.

ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದರು ಈ ಚಿನ್ನದ ಗೀತೆಯನ್ನು ಅಲಂಕೃತ ತೊಟ್ಟಿಲಿನಲ್ಲಿಟ್ಟು ತೂಗಿ ಕೃಷ್ಣನಿಗೆ ಸಮರ್ಪಿಸಿದರು. ಭಗವದ್ಗೀತೆಯ ಲೇಖನ ಮತ್ತು ಪಾರಾಯಣಕ್ಕೆ ಭಕ್ತರ ಇಚ್ಚೆ ಇನ್ನೂ ಹೆಚ್ಚಾಗಿರುವುದರಿಂದ ತಾವು ಪರ್ಯಾಯದ 2 ವರ್ಷದ ಅವಧಿಗೆ ಹಮ್ಮಿಕೊಂಡಿದ್ದ ಕೋಟಿ ಗೀತಾ ಲೇಖನ ಯಜ್ಞವನ್ನು ಇನ್ನೂ ಎರಡು ವರ್ಷ ಮುಂದುವರಿಸುತ್ತಿರುವುದಾಗಿ ಈ ವೇಳೆ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ಘೋಷಿಸಿದರು.

ಈ ವೇಳೆ ಮಾತನಾಡಿದ ಚಿನ್ನದ ಭಗವದ್ಗೀತೆಯ ದಾನಿ ಎಸ್. ಲಕ್ಷ್ಮೀನಾರಾಯಣನ್ ಅವರು, ತಾವು ಪುತ್ತಿಗೆ ಶ್ರೀಗಳಿಂದ ಗೀತಾ ಲೇಖನ ದೀಕ್ಷೆ ಸ್ವೀಕರಿಸಿದ್ದೆವು. ಆದರೆ ಕಾರ್ಯಬಾಹುಳ್ಯದಿಂದ ಬರೆಯುವುದನ್ನು ಮರೆತುಬಿಟ್ಟಿದ್ದೆ, ಕೆಲವು ತಿಂಗಳ ಹಿಂದೆ ನನಗೆ ಗೀತಾ ಲೇಖನ ಪೂರ್ಣಗೊಳಿಸಿದ್ದಕ್ಕೆ ಅಂಚೆಯಲ್ಲಿ ಪ್ರಮಾಣಪತ್ರ ಮತ್ತು ಪ್ರಸಾದ ಬಂತು, ನನಗೆ ಅಚ್ಚರಿಯಾಯಿತು, ನಾನು ಇನ್ನೂ ಬರೆದೇ ಇಲ್ಲ ಎಂದು ಪತ್ನಿಗೆ ಹೇಳಿದೆ. ಆಗ ಪತ್ನಿ ಇದು ಕೃಷ್ಣನ ಸೂಚನೆ, ಇನ್ನಾದರೂ ಬರೆಯಿರಿ ಎಂದಳು. ಆದರೆ ನನಗೆ ಬರೆಯುವುದಕ್ಕೆ ಕನ್ನಡ ಬರುವುದಿಲ್ಲ. ಅದಕ್ಕೆ ಚಿನ್ನದಲ್ಲಿ ಬರೆಸುವ ಯೋಚನೆ ಮಾಡಿದೆ ಎಂದು ಹೇಳಿದರು.

ಪುತ್ತಿಗೆ ಶ್ರೀಗಳು ಲಕ್ಷ್ಮೀನಾರಾಯಣನ್ ಅವರಿಗೆ ಕೃಷ್ಣ ಗೀತಾನುಗ್ರಹ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಪುತ್ತಿಗೆ ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನಿಧ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಇಸ್ರೋ ವಿಜ್ಞಾನಿ ಡಾ. ಎಸ್.ವಿ. ಶರ್ಮ, ಮಾಹೆ ಸಹಕುಲಪತಿ ಡಾ. ಎಚ್.ಎಸ್. ಬಲ್ಲಾಳ್ ಅವರಿಗೆ ಜೀವಮಾನ ಸಾಧನೆಗೆ ಶ್ರೀಗಳು ವಿಶೇಷ ಸನ್ಮಾನ ನಡೆಸಿದರು. ಪಂಡಾಪುರದ ಪ್ರಧಾನ ಟ್ರಸ್ಟಿ ಶನೇಶ್ವರ ಮಹಾರಾಜ್, ಜ್ಞಾನೇಶ್ವರ ಕ್ಷೇತ್ರದ ಪ್ರಧಾನ ಅರ್ಚಕ ಗಿರೀಶ್ ತುಕ್ರಿ, ಮುಂಬೈ ಉದ್ಯಮಿಗಳಾದ ಹಿಮಾಂಶು ಮತ್ತು ನಟರಾಜ್, ಚೆನೈನ ಸಿಎ ಹರಿಕೃಷ್ಣ ಅವರನ್ನು ಶ್ರೀಗಳು ಗೌರವಿಸಿದರು. ವಿದ್ವಾನ್ ಡಾ. ಗೋಪಾಲಾಚಾರ್ಯರು ಕಾರ್ಯಕ್ರಮ ಸಂಯೋಜಿಸಿದರು.