Home Crime ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಕಾರು ಚಾಲಕನಿಗೆ ಚಾಕು ಇರಿತ…!!

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಕಾರು ಚಾಲಕನಿಗೆ ಚಾಕು ಇರಿತ…!!

ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಕಾರು ಚಾಲಕನಿಗೆ ದುಷ್ಕರ್ಮಿಗಳಿಂದ ಚಾಕು ಇರಿದಿರುವಂತಹ ಘಟನೆ ಬೆಳಗಾವಿ ನಗರದ ಕ್ಲಬ್ ರಸ್ತೆಯಲ್ಲಿ ನಡೆದಿದೆ.

ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ನಿವಾಸಿ ಬಸವಂತ ಕಡೋಲ್ಕರ್(32)ಗೆ ಬೈಕ್ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಎದೆ, ಭುಜ, ತೊಡೆ ಸೇರಿ ನಾಲ್ಕು ಕಡೆ ಚಾಕುವಿನಿಂದ ಇರಿದು ಪರಾರಿ ಆಗಿದ್ದಾರೆ.

ಮೈನಿಂಗ್ ವಿಚಾರಕ್ಕೆ ಈ ಹಲ್ಲೆ ನಡೆದಿದೆ ಎನ್ನಲಾಗಿದೆ. ಸದ್ಯ ಗಾಯಾಳು ಬಸವಂತರನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ನಿವಾಸಿ ಬಸವಂತ ಕಡೋಲ್ಕರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಕಾರು ಚಾಲಕರಾಗಿದ್ದಾರೆ.

ಬೆಳಗಾವಿ ನಗರದ ಕ್ಲಬ್ ರಸ್ತೆಯಲ್ಲಿ ಕಾರು ನಿಲ್ಲಿಸಿ ಕೆಳಗೆ ನಿಂತಿದ್ದರು. ಈ ವೇಳೆ ಬೈಕ್ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿ ಆಗಿದ್ದಾರೆ.

ಹಲ್ಲೆ ಮಾಡಿರುವವರು ಬೆಳಗಾವಿ ತಾಲೂಕಿನ ಗೊಜಗಾ ಮೂಲದವರು ಎನ್ನಲಾಗುತ್ತಿದೆ. ಚಾಕು ಇರಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ.

ಇನ್ನು ಐಪಿಎಸ್ ಅಧಿಕಾರಿ ರವೀಂದ್ರ ಗಡಾದಿ ಬಸವಂತ ಕಡೋಲ್ಕರ್ ಜೀವ ಉಳಿಸಿದ್ದಾರೆ. ಘಟನೆ ವೇಳೆ ರವೀಂದ್ರ ಗಡಾದಿ ಅವರು ಮನೆಗೆ ಊಟಕ್ಕೆ ಹೋಗುತ್ತಿದ್ದರು. ಗಲಾಟೆ ನೋಡುತ್ತಿದ್ದಂತೆ ಸ್ಥಳಕ್ಕೆ ಹೋಗಿ ದುಷ್ಕರ್ಮಿಗಳಿಂದ ಬಸವಂತನ ಜೀವ ಉಳಿಸಿದ್ದಾರೆ.

ಸದ್ಯ ಆಸ್ಪತ್ರೆಗೆ ಡಿಸಿಪಿ, ಎಸಿಪಿ ಹಾಗೂ ಸಚಿವೆ ಲಕ್ಷ್ಮೀ ಪುತ್ರ ಮೃಣಾಲ್ ಭೇಟಿ ನೀಡಿದ್ದಾರೆ. ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದೆ. ಹಲ್ಲೆಗೊಳಗಾದ ಬಸವಂತ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಮೈನಿಂಗ್ ವಿಚಾರದಲ್ಲಿ ಬಂದು ನನ್ಮೇಲೆ ಹಲ್ಲೆ ಮಾಡಿದ್ದಾರೆ. ಮೈನಿಂಗ್ ವಿಚಾರಕ್ಕೆ ಪದೇಪದೆ ಜಗಳ ತೆಗೆಯುತ್ತಿದ್ದರು. ಇಂದು ಗೋಜಗಾ ಗ್ರಾಮದ ಶಿವಾ ಪೂಜಾರಿ, ಪರಶುರಾಮ ಮತ್ತು ಮೋನಪ್ಪ ಪಾಟೀಲ್ ಬಂದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.