ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರದ ಬೊಬ್ಬರ್ಯನಕಟ್ಟೆ ಎದುರಿನ ಮನೆಯಲ್ಲಿ ಬಾಗಿಲಿನ ಚಿಲಕ ಮುರಿದು ಒಳನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ನಗದು ಕಳವು ಮಾಡಿ ಪರಾರಿಯಾಗಿರುವ ಘಟನೆ ಸಂಭವಿಸಿದೆ.
ಶಾರದಾ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಶಾರದಾ ಅವರ ಪುತ್ರ ವಿಜಯ್ ನವೀನ್ ಕುಮಾರ್ ಅವರು ತಾಯಿಯನ್ನು ಕೋಟದಲ್ಲಿರುವ ದೊಡ್ಡಮ್ಮನ ಮನೆಯಲ್ಲಿ ಬಿಟ್ಟು ಆ.8ರಂದು ಮುಂಬಯಿಗೆ ತೆರಳಿದ್ದರು. ಆ.13ರ ಬೆಳಗ್ಗೆ ಮನೆಗೆ ವಾಪಸ್ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಮನೆಯ ಮುಂಭಾಗದ ಬಾಗಿಲಿನ ಚಿಲಕವನ್ನು ಯಾವುದೋ ಆಯುಧದಿಂದ ಮುರಿದು ಕಳ್ಳರು ಒಳನುಗ್ಗಿದ್ದಾರೆ. ಬಳಿಕ ಗೋದ್ರೇಜ್‌ನಲ್ಲಿದ್ದ ಸುಮಾರು 8 ಗ್ರಾಂ ತೂಕದ ಚಿನ್ನಾಭರಣ ಹಾಗೂ ವಿದೇಶಿ ಕರೆನ್ಸಿ ಸೇರಿದಂತೆ ಅಂದಾಜು 95 ಸಾವಿರ ರೂ. ಮೌಲ್ಯದ ಚಿನ್ನ ಮತ್ತು ನಗದನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.
ವಿಷಯ ತಿಳಿದು ಕುಂದಾಪುರ ವೃತ್ತ ನಿರೀಕ್ಷಕ ಜಯರಾಮ ಗೌಡ, ನಗರ ಠಾಣೆಯ ಪಿಎಸ್‌ಐ ಪುಷ್ಪಾ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




