Home Crime ಕಾರ್ಕಳ : ಬೆಳ್ಮಣ್ಣಿನ ಅಕ್ರಮ ಗಣಿಗಾರಿಕೆ ಅಡ್ಡೆಗೆ ಗಣಿ ಅಧಿಕಾರಿಗಳ ದಾಳಿ : ಸರ್ಕಾರಕ್ಕೆ ರಾಜಧನ...

ಕಾರ್ಕಳ : ಬೆಳ್ಮಣ್ಣಿನ ಅಕ್ರಮ ಗಣಿಗಾರಿಕೆ ಅಡ್ಡೆಗೆ ಗಣಿ ಅಧಿಕಾರಿಗಳ ದಾಳಿ : ಸರ್ಕಾರಕ್ಕೆ ರಾಜಧನ ವಂಚಿಸಿ ಕೇರಳಕ್ಕೆ ಸಾಗಿಸುತ್ತಿದ್ದ ಜಲ್ಲಿ ಸಾಗಾಟದ ಲಾರಿಗಳು ಸೀಜ್…!!

ಕಾರ್ಕಳ : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಾದ್ಯಂತ ಅಕ್ರಮ ಕಲ್ಲು ಗಣಿಗಾರಿಕೆ ಮಿತಿಮೀರಿದ್ದು, ಸರ್ಕಾರಕ್ಕೆ ನಯಾಪೈಸೆ ರಾಜಧನ ಪಾವತಿಸದೇ ಗಣಿ ಸಂಪತ್ತು ಕಳ್ಳರ ಪಾಲಾಗುತ್ತಿರುವ ಗಂಭೀರ ಆರೋಪದ ಹಿನ್ನಲೆಯಲ್ಲಿ ಗಣಿ ಇಲಾಖೆಯ ಅಧಿಕಾರಿಗಳು ಶುಕ್ರವಾರ ನಸುಕಿನ ವೇಳೆ ಕಾರ್ಕಳ ತಾಲೂಕಿನ ಬೆಳ್ಮಣ್ ಎಂಬಲ್ಲಿ ದಿಢೀರ್ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಜಲ್ಲಿ, ಎಂ ಸ್ಯಾಂಡನ್ನು ವಶಕ್ಕೆ ಪಡೆದಿದ್ದಾರೆ.

ಗಣಿಗಾರಿಕೆಯ ಯಾವುದೇ ಪರವಾನಗಿ ಪಡೆಯದೇ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಲೂಟಿಕೋರರು ರಾಜ್ಯಕ್ಕೆ ತೆರಿಗೆ ವಂಚಿಸಿ ಕೇರಳಕ್ಕೆ ಗಣಿ ಉತ್ಪನ್ನಗಳನ್ನು ಅಕ್ರಮ ಸಾಗಾಟ ಮಾಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ಮುಂಜಾನೆ ಮೂರು ಗಂಟೆಗೆ ದಾಳಿ ನಡೆಸಿದ್ದು, ಬೃಹತ್ ಗಾತ್ರದ ಐದು ಟ್ರೇಲರ್ ಲಾರಿ ವಶಪಡಿಸಿ ಕಾರ್ಕಳ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ದಾಳಿಯ ವೇಳೆ ಹಲವಾರು ವಾಹನಗಳು ತಪ್ಪಿಸಿಕೊಂಡಿದ್ದರೆ, ಓರ್ವ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ.

ಕಾರ್ಕಳ ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಆರೋಪದ ಹಿನ್ನಲೆಯಲ್ಲಿ ಕಲ್ಲುಗಣಿ ಗುತ್ತಿಗೆದಾರರಿಗೆ ಗಣಿ ಮತ್ತು ಭೂ-ವಿಜ್ಞಾನ ಇಲಾಖೆಯ ಅಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದಾರೆ. ಹತ್ತು ದಿನಗಳೊಳಗಾಗಿ ಸ್ಪಂದಿಸದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಕಲ್ಲು ಗಣಿಗುತ್ತಿಗೆಯ ಎಲ್ಲಾ ಗಡಿಕಲ್ಲು /ಬಾಂದುಗಳನ್ನು ಸ್ಪಷ್ಟವಾಗಿ ಗುರುತಿಸಿಕೊಂಡು ಗುತ್ತಿಗೆಯ ವಿವರಗಳಿರುವ ನಾಮಫಲಕವನ್ನು ನೆಟ್ಟು ಹಾಳಾಗದಂತೆ ಯಾವಾಗಲೂ ಕಾಪಾಡಿಕೊಳ್ಳುವುದು. ಕಲ್ಲುಗಣಿ ಗುತ್ತಿಗೆ ಗಡಿ ಪ್ರದೇಶದೊಳಗೆ ಮಾತ್ರ ಕಲ್ಲು ಗಣಿಗಾರಿಕೆ ಕಾರ್ಯವನ್ನು ನಡೆಸತಕ್ಕದ್ದು. ಕಲ್ಲುಗಣಿ ಗುತ್ತಿಗೆ ಪ್ರದೇಶದಲ್ಲಿ ಉಂಟಾಗಿರುವ ಗುಣಡಿಗಳ ಸುತ್ತಲೂ ಸುರಕ್ಷತಾ ಕ್ರಮ ಕಯಗೊಂಡು ಗಡಿಸ್ತಂಭಗಳನ್ನು ನಿರ್ಮಿಸಿ ಮಾಹಿತಿ ಫಲಕ, ಎಚ್ಚರಿಕೆ ಫಲಕ, ತಂತಿಬೇಲಿ ನಿರ್ಮಿಸಲು ಕ್ರಮವಹಿಸುವುದು. ತಮಗೆ ಮಂಜೂರಾದ ಕಲ್ಲು ಗಣಿಗುತ್ತಿಗೆ ಅವಧಿ ಮುಗಿದ ನಂತರ ಕಲ್ಲು ಗಣಿಗುತ್ತಿಗೆ ಹೊಂಡಗಳನ್ನು ಮುಚ್ಚಿ ಸುರಕ್ಷಿತಾ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ.

ಲೀಸ್ ಇಲ್ಲದೇ ಅಕ್ರಮ ಗಣಿಗಾರಿಕೆ ನಡೆಸುವ ದಂಧೆಕೋರರಿಗೆ ನಡುಕ: ತಾಲೂಕಿನಲ್ಲಿ ಈಗಾಗಲೇ ಲೀಸ್ ಪಡೆದ ಮಾಲಿಕರು ತಲಾ ಒಂದು, ಎರಡು ಅಥವಾ ಮೂರು ಎಕರೆ ಪ್ರದೇಶಕ್ಕೆ 20ರಿಂದ 30 ವರ್ಷಗಳ ಕಾಲ ಪರವಾನಿಗೆ ಪಡೆದುಕೊಂಡಿದ್ದಾರೆ. ಆದರೆ ಪರವಾನಿಗೆ ಪಡೆದ ಪ್ರದೇಶದ ಜತೆಗೆ ಸುತ್ತಮುತ್ತದ ಎಲ್ಲಾ ಪ್ರದೇಶವನ್ನು ಕಬಳಿಸಿ ಗಣಿಗಾರಿಕೆ ನಡೆಸಿ ಸರಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ್ದಾರೆ. ಆದರೆ ಈ ಬಾರಿ ಗಣಿ ಅಧಿಕಾರಿಗಳು ನೀಡಿದ ಆದೇಶ, ಗಣಿ ಮಾಲಿಕರಿಗೆ ನಡುಕ ಹುಟ್ಟಿಸಿದೆ. ಜತೆಗೆ ಈ ಹಿಂದೆ ಅಧಿಕಾರಿಗಳೇ ಈ ಅಕ್ರಮದಲ್ಲಿ ಶಾಮೀಲಾಗಿದ್ದು, ಪರವಾನಿಗೆ ಪಡೆದ ಗುತ್ತಿಗೆದಾರನಿಗೆ ದಿನಕ್ಕೆ ಎಷ್ಟು ಘನಮೀಟರ್‌ನಷ್ಟು ಕಲ್ಲು ತೆರವುಗೊಳಿಸಲು ಅವಕಾಶವಿದೆ ? ಎಂಬುವುದರ ಬಗ್ಗೆ ನಿರ್ದೇಶನ ನೀಡಿಲ್ಲ. ಅಲ್ಲದೆ ಪ್ರತಿ ವರ್ಷ ದಂಡ ವಿಧಿಸುವ ಕ್ರಮ ಕೈಗೊಳ್ಳುತ್ತಿದ್ದು, ಒಬ್ಭ ವ್ಯಕ್ತಿ ತಪ್ಪುಗಳ ಪುನರಾವರ್ತನೆ ನಿರಂತರ ನಡೆಸುತ್ತಿದ್ದರೂ, ಪ್ರತಿ ವರ್ಷ ದಂಡವೇ ವಿಧಿಸಿದ್ದಾರೆ ಹೊರತು, ಅಂತವರ ವಿರುದ್ದ ಯಾವುದೇ ಕಠಿಣ ಕ್ರಮ ಕೈಗೊಳ್ಳದೆ ಮೃಧು ಧೋರಣೆ ತೋರಿರುವುದು ಮಾಹಿತಿ ಹಕ್ಕಿನಡಿ ಪಡೆದ ದಾಖಲೆಯಿಂದ ಸಾಬೀತಾಗಿದೆ.