Home Crime ಮಲ್ಪೆ: ಪತ್ನಿಯ ಅನಾರೋಗ್ಯಕ್ಕೆ ಬೇಸತ್ತು ಪತಿ ಆತ್ಮಹತ್ಯೆ…!!

ಮಲ್ಪೆ: ಪತ್ನಿಯ ಅನಾರೋಗ್ಯಕ್ಕೆ ಬೇಸತ್ತು ಪತಿ ಆತ್ಮಹತ್ಯೆ…!!

ಮಲ್ಪೆ: ಪತ್ನಿಯ ಅನಾರೋಗ್ಯದ ವಿಚಾರದಲ್ಲಿ ಮಾನಸಿಕವಾಗಿ ನೊಂದಿದ್ದ 64 ವರ್ಷದ ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೃತರನ್ನು ಕೊಡವೂರು ಗ್ರಾಮದ ಸಾಂಘ್ವಿ ಸಾಲ್ಮರ ನಿವಾಸಿ ಆನಂದ ಜಿ. ಮೈಂದನ್ (64) ಎಂದು ಗುರುತಿಸಲಾಗಿದೆ.

ಅವರು ಮಲ್ಪೆ ಬಂದರಿನಲ್ಲಿರುವ ಬೋಟುಗಳಿಗೆ ಗ್ಯಾಸ್‌ ಸಪ್ಲೈ ಮಾಡುವ ಕೆಲಸ ಮಾಡುತ್ತಿದ್ದರು.

ಆನಂದ್ ಅವರ ಪತ್ನಿ ಧಮಯಂತಿ ಅವರು ಕ್ಯಾನ್ಸರ್‌ ಸಮಸ್ಯೆಯಿಂದ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಕಾರಣದಿಂದ ಅಕ್ಕನ ಮನೆಯಲ್ಲಿ ವಾಸವಾಗಿದ್ದರು. ಪುತ್ರ ಬೆಂಗಳೂರಿನಲ್ಲಿ ವಾಸವಾಗಿದ್ದು, ಆನಂದ್ ಅವರು ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು.

ಆಗಸ್ಟ್ 12ರಂದು ಸಂಜೆ ಸುಮಾರು 6:45ಕ್ಕೆ ಅವರು ಪತ್ನಿಯೊಂದಿಗೆ ಕೊನೆಯದಾಗಿ ಫೋನ್‌ನಲ್ಲಿ ಮಾತನಾಡಿದ್ದರು. ಆಗಸ್ಟ್ 13ರಂದು ಬೆಳಗ್ಗೆ 6:15ಕ್ಕೆ ಪುತ್ರ ಬೆಂಗಳೂರಿನಿಂದ ಮನೆಗೆ ಬಂದು ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಫೋನ್‌ ಕರೆ ಮಾಡಿದಾಗಲೂ ರಿಂಗ್‌ ಆಗುತ್ತಿದ್ದರೂ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಅನುಮಾನಗೊಂಡ ಪುತ್ರ ಹಾಗೂ ಸ್ಥಳೀಯರು ಮನೆಯ ಬಾಗಿಲು ಒಡೆದು ಒಳಪ್ರವೇಶಿಸಿದ್ದಾರೆ.

ಈ ವೇಳೆ ಬೆಡ್‌ರೂಮ್‌ನಲ್ಲಿದ್ದ ಫ್ಯಾನ್‌ಗೆ ಶಾಲ್ ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಆನಂದ್ ಅವರ ಮೃತದೇಹ ಪತ್ತೆಯಾಗಿದೆ.

ಪತ್ನಿಯ ಆರೋಗ್ಯ ಸಮಸ್ಯೆಯಿಂದ ಮಾನಸಿಕವಾಗಿ ನೊಂದು ಆಗಸ್ಟ್ 12ರ ಸಂಜೆ 6:45ರಿಂದ ಆಗಸ್ಟ್ 13ರ ಬೆಳಗ್ಗೆ 6:15ರ ನಡುವಿನ ಅವಧಿಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.