ಕಾರ್ಕಳ: ವಾಣಿಜ್ಯ ಪೈಲಟ್ ಲೈಸನ್ಸ್ ಪಡೆದುಕೊಳ್ಳುವ ಮೂಲಕ ಕೌಡೂರು ರಂಗನಪಲ್ಕೆಯ ಶೈನಿ ಅಸ್ಮಾ ಸಲ್ಡಾನಾ ಅವರು ಉಡುಪಿ ಜಿಲ್ಲೆಯ ಪ್ರಥಮ ಮಹಿಳಾ ವಾಣಿಜ್ಯ ಪೈಲಟ್ ಎಂಬ ಕೀರ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಅಶೋಕ್ ಜಾಕೋಬ್ ಸಾಲ್ಡಾನಾ ಮತ್ತು ಮರಿಯಾ ಗ್ರೆಟ್ಟಾ ಅವರ ಪುತ್ರಿಯಾದ ಶೈನಿ ತಮ್ಮ ಪೈಲಟ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಕಮರ್ಷಿಯಲ್ ಪೈಲಟ್ ಲೈಸನ್ಸ್ ಪಡೆದುಕೊಂಡಿದ್ದಾರೆ.
ಕಾರ್ಕಳದ ಕ್ರೈಸ್ಟ್‌ಕಿಂಗ್ ವಿದ್ಯಾಸಂಸ್ಥೆಯಲ್ಲಿ ಶೈನಿ ತಮ್ಮ ಪ್ರಾಥಮಿಕ ಮತ್ತು ಪಿಯುಸಿ ಶಿಕ್ಷಣವನ್ನು ಮುಗಿಸಿದ್ದಾರೆ. ಪೈಲಟ್ ತರಬೇತಿಗೆ ಶೈನಿ ಅವರು ಬೆಂಗಳೂರಿನಲ್ಲಿ ನಡೆದ ಪ್ರತಿಷ್ಠಿತ ಇಂದಿರಾ ಗಾಂಧಿ ರಾಷ್ಟ್ರೀಯ ಉಡಾನ್ ಅಕಾಡೆಮಿ ಪ್ರವೇಶ ಪರೀಕ್ಷೆಯನ್ನು ಬರೆದು ಯಶಸ್ವಿಯಾಗಿ ಉತ್ತೀರ್ಣರಾಗಿದ್ದರು. ನಂತರ 2023ರ ಆಗಸ್ಟ್ ನಿಂದ ಉತ್ತರಪ್ರದೇಶದ ಫುರ್ಸತ್ ಗಂಜ್ ನಲ್ಲಿರುವ ಪ್ರತಿಷ್ಠಿತ ಇಂದಿರಾಗಾಂಧಿ ರಾಷ್ಟ್ರೀಯ ಉಡಾನ್ ಅಕಾಡೆಮಿಯಲ್ಲಿ ಕಠಿಣ ವೃತ್ತಿಪರ ಪೈಲಟ್ ತರಬೇತಿ ಪಡೆದಿದ್ದರು.




