ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಗ್ರಾಮದಲ್ಲಿ ರಬ್ಬರ್ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ವಿಷ ಜಂತು ಕಚ್ಚಿ ಗಾಯಗೊಂಡಿದ್ದ ಕೆಲಸಗಾರರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.
ಮೃತರು ಸುರೇಂದ್ರನ್ ಪಿ.ಎ (55) ಕುಟ್ಟಿಮಂಗಲಂ ತಾಲೂಕಿನ ನಿವಾಸಿ ಎಂದು ತಿಳಿಯಲಾಗಿದೆ.
ಅವರು ಕಳೆದ 5 ವರ್ಷಗಳಿಂದ ಕಾರ್ಕಳ ತಾಲೂಕು ಮಾಳ ಗ್ರಾಮದ ಅಳಪಳ್ಳಿ ದೇವಸ್ಥಾನದ ಬಳಿ ಜೋಬಿಷ್ ಅವರ ರಬ್ಬರ್ ತೋಟದಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದರು.
ದಿನಾಂಕ 28/08/2026 ರಂದು ಬೆಳಿಗ್ಗೆ 8:00 ಗಂಟೆ ಸುಮಾರಿಗೆ ಕೆಲಸ ಮಾಡುತ್ತಿರುವಾಗ ಶೆಡ್‌ನಲ್ಲಿದ್ದ ರಬ್ಬರ್ ಶೀಟ್ ಟ್ರೇ ತೆಗೆಯುವಾಗ ಅವರ ಎಡ ಕೈಗೆ ಯಾವುದೋ ಜಂತು ಕಚ್ಚಿದೆ ನೋವು ಹೆಚ್ಚಾದರೂ ಅವರು ತಕ್ಷಣ ಚಿಕಿತ್ಸೆ ಪಡೆಯಲಿಲ್ಲ.
ನಂತರ ದಿನಾಂಕ 30/08/2026 ರಂದು ಬೆಳಿಗ್ಗೆ 7:00 ಕ್ಕೆ ಮನೆಯಿಂದ ಅವರನ್ನು ಜೊತೆಯಲ್ಲಿದ್ದ ಕೆಲಸಗಾರ ಸಾಜು ಅವರು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆತಂದರು.
ಅಲ್ಲಿನ ವೈದ್ಯಾಧಿಕಾರಿಗಳು ಪ್ರಥಮ ಚಿಕಿತ್ಸೆ ನೀಡಿದರೂ ಚಿಕಿತ್ಸೆಗೆ ಸ್ಪಂದಿಸದೆ ಬೆಳಿಗ್ಗೆ 8:17ಕ್ಕೆ ಸುರೇಂದ್ರನ್ ಅವರು ಮೃತಪಟ್ಟರು.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ UDR ಕ್ರಮಾಂಕ: 44/2026, ಕಲಂ: 194 BNSS ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




