Home Crime ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ನನ್ನು ಕಿಡ್ನ್ಯಾಪ್ ಮಾಡಿ ಮರಕ್ಕೆ ಕಟ್ಟಿ ಬೆಂಕಿ ಹಚ್ಚಿ ಹಲ್ಲೆ :...

ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ನನ್ನು ಕಿಡ್ನ್ಯಾಪ್ ಮಾಡಿ ಮರಕ್ಕೆ ಕಟ್ಟಿ ಬೆಂಕಿ ಹಚ್ಚಿ ಹಲ್ಲೆ : ಚಿಕಿತ್ಸೆ ಫಲಿಸದೇ ಸಾವು…!!

ಚಂಡೀಗಢ: ಪಂಜಾಬ್ ಮೂಲದ 28 ವರ್ಷದ ಪ್ರಭಾವಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ನನ್ನು ಅಪಹರಿಸಿ, ಹಲ್ಲೆ ನಡೆಸಿ ಮರಕ್ಕೆ ಕಟ್ಟಿ ಬೆಂಕಿ ಹಚ್ಚಿದ್ದ ಭೀಕರ ಘಟನೆ ಎರಡು ತಿಂಗಳ ಹಿಂದೆ ನಡೆದಿತ್ತು. ಬಳಿಕ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಈಗ ಅವರು ಚಿಕಿತ್ಸೆ ಫಲಿಸದೆ ಆಗಸ್ಟ್ 26 ರಂದು ಚಂಡೀಗಢದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮಂಜೀತ್ ಕೌರ್ ಎಂಬಾಕೆ ಸಾವನ್ನಪ್ಪಿದ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್. ಮಂಜೀತ್ ಕೌರ್ ಅವರ ತಾಯಿ ನೀಡಿದ ದೂರಿನ ಪ್ರಕಾರ, ಜುಲೈ 3 ರಂದು ಚಂಡೀಗಢದ ಸೆಕ್ಟರ್ 34 ರಲ್ಲಿರುವ ಮದ್ಯದಂಗಡಿಯ ಬಳಿ ಶುಭಿ ಮತ್ತು ಪಿಂಡಾ ಎಂಬ ಇಬ್ಬರು ಪರಿಚಯಸ್ಥರು ಮಂಜೀತ್ ಅವರನ್ನು ಆಮಿಷವೊಡ್ಡಿ ಭೇಟಿಯಾಗಿದ್ದರು. ಬಳಿಕ ಆಕೆಯನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಪಂಜಾಬ್‌ನ ರೂಪನಗರ ಜಿಲ್ಲೆಯ ಮೊರಿಂಡಾಗೆ ಅಪಹರಿಸಿ ಕರೆದೊಯ್ದಿದ್ದರು. ಅಲ್ಲಿ ಆಕೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ ಆರೋಪಿಗಳು, ಮರಕ್ಕೆ ಕಟ್ಟಿ ಬೆಂಕಿ ಹಚ್ಚಿದ್ದರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಆಕೆಯ ಸ್ನೇಹಿತರೊಬ್ಬರು ಕಂಬಳಿ ಬಳಸಿ ಬೆಂಕಿಯನ್ನು ನಂದಿಸಿ ಆಕೆಯನ್ನು ರಕ್ಷಿಸಿದ್ದರು.ಶೇಕಡಾ 50ಕ್ಕೂ ಹೆಚ್ಚು ಸುಟ್ಟ ಗಾಯಗಳಾಗಿದ್ದ ಕೌರ್ ಅವರನ್ನು ಮೊದಲು ಮೊರಿಂಡಾದ ಆಸ್ಪತ್ರೆಗೆ, ಬಳಿಕ ಮೊಹಾಲಿಗೆ ಮತ್ತು ಗಂಭೀರ ಸ್ಥಿತಿಯಲ್ಲಿದ್ದ ಕಾರಣ ಜುಲೈ 9 ರಂದು ಚಂಡೀಗಢದ PGIMER ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸತತ ಹಲವು ವಾರಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರು, ಆಗಸ್ಟ್ 5 ರಂದು ಕೊಂಚ ಪ್ರಜ್ಞೆ ಮರಳಿದಾಗ ನಡೆದ ಕೃತ್ಯವನ್ನು ಕುಟುಂಬಸ್ಥರಿಗೆ ವಿವರಿಸಿದ್ದರು. ಆದರೆ ತದನಂತರ ಆಕೆಯ ಆರೋಗ್ಯ ಸ್ಥಿತಿ ಮತ್ತಷ್ಟು ಕ್ಷೀಣಿಸಿ ಆಗಸ್ಟ್ 26 ರಂದು ಕೊನೆಯುಸಿರೆಳೆದಿದ್ದಾರೆ.

ಜುಲೈ 28 ರಂದು ಮಂಜೀತ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಆಕೆಯ ಸ್ನೇಹಿತೆ ಗಿಲ್ ಮೊಹಾಲಿ ಜೊತೆ ಜಂಟಿಯಾಗಿ ವಿಡಿಯೋ ಹಂಚಿಕೊಂಡಿದ್ದು, “ಮಂಜೀತ್ 50% ಚೇತರಿಸಿಕೊಂಡಿದ್ದಾರೆ, ಇನ್ನೊಂದು 10-15 ದಿನಗಳಲ್ಲಿ ಅವರೇ ಲೈವ್ ಬಂದು ತಮಗಾದ ಅನ್ಯಾಯವನ್ನು ವಿವರಿಸಲಿದ್ದಾರೆ. ದಯವಿಟ್ಟು ಯಾರೂ ಅವರನ್ನು ತಪ್ಪಾಗಿ ನಿರ್ಣಯಿಸಬೇಡಿ” ಎಂದು ಮನವಿ ಮಾಡಿದ್ದರು. ಆದರೆ ಲೈವ್ ಬಂದು ಸತ್ಯ ಹೇಳುವ ಆ ಕ್ಷಣ ಎಂದಿಗೂ ಬರಲೇ ಇಲ್ಲ. ಈ ಭೀಕರ ದಾಳಿಯ ಹಿಂದಿನ ನಿಖರ ಉದ್ದೇಶ ಏನೆಂಬುದು ಇನ್ನು ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಮುಖ್ಯ ಆರೋಪಿಗಳಾದ ಶುಭಿ ಮತ್ತು ಪಿಂಡಾ ಅವರನ್ನು ಪತ್ತೆಹಚ್ಚಿ ಬಂಧಿಸಲು ಪೊಲೀಸರು ವಿಶೇಷ ಪಡೆಗಳೊಂದಿಗೆ ದಾಳಿ ನಡೆಸುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳು ಸೇರಿದಂತೆ ಪ್ರಮುಖ ಸಾಕ್ಷ್ಯಗಳನ್ನು ಕಲೆಹಾಕುತ್ತಿದ್ದಾರೆ.