Home Crime ಅಧಿಕ ಬಡ್ಡಿಗೆ ಸಾಲ ನೀಡಿ ಸಾರ್ವಜನಿಕರಿಗೆ ಕಿರುಕುಳ : ಸಾನಿಧ್ಯ ಫೈನಾನ್ಸ್‌ನ ಮೂವರು ಆರೋಪಿಗಳು ಅರೆಸ್ಟ್…!!

ಅಧಿಕ ಬಡ್ಡಿಗೆ ಸಾಲ ನೀಡಿ ಸಾರ್ವಜನಿಕರಿಗೆ ಕಿರುಕುಳ : ಸಾನಿಧ್ಯ ಫೈನಾನ್ಸ್‌ನ ಮೂವರು ಆರೋಪಿಗಳು ಅರೆಸ್ಟ್…!!

ಉಡುಪಿ: ಅಧಿಕ ಬಡ್ಡಿ ದರದಲ್ಲಿ ಸಾಲ ನೀಡಿ, ಕಂತಿನ ಹಣ ಬಾಕಿ ಉಳಿದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕಿರುಕುಳ ನೀಡಿದ ಆರೋಪದಡಿ ಸಾನಿಧ್ಯ ಫೈನಾನ್ಸ್‌ನ ಮೂವರನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.

ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜಾಲು ಪರಿಸರದಲ್ಲಿ ಅಧಿಕ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿತ್ತು. ಸಾಲದ ಕಂತಿನ ಹಣ ಬಾಕಿ ಇದ್ದ ಸಂದರ್ಭದಲ್ಲಿ ಹಣಕ್ಕಾಗಿ ಸಾರ್ವಜನಿಕರನ್ನು ಪೀಡಿಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ಕುಂಜಾಲಿನ ಗಣೇಶ್ ಗಾಣಿಗ ಅವರ KA-03-HF-8253 ನೋಂದಣಿ ಸಂಖ್ಯೆಯ ಮೋಟಾರು ಸೈಕಲ್‌ನ್ನು ಬಲವಂತವಾಗಿ ತೆಗೆದುಕೊಂಡು ಹೋಗಿ, ಜಾಮೀನುದಾರ ರಾಜೇಶ್ ನಾಯ್ಕ್ ಅವರಿಗೆ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ರಾಜೇಶ್ ನಾಯ್ಕ್ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಅಪರಾಧ ಕ್ರಮಾಂಕ 144/2026ರಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 137(2), 115(2), 118(2), 308, 351(2), 352 ಹಾಗೂ 190 ಮತ್ತು ಕರ್ನಾಟಕ ಅಧಿಕ ಬಡ್ಡಿ ವಿಧಿಸುವುದನ್ನು ನಿಷೇಧಿಸುವ ಕಾಯ್ದೆ–2004ರ ಕಲಂ 3 ಮತ್ತು 4ರ ಅಡಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಸಂದೀಪ್ ಶೆಟ್ಟಿ (ಕುಲಾಯಿ, ಮಂಗಳೂರು) ಹಾಗೂ ವಿಜೀತ್ ಶೆಟ್ಟಿ (ಕಾವೂರು, ಮಂಗಳೂರು) ಅವರನ್ನು ಆ.6ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಮತ್ತೊಬ್ಬ ಆರೋಪಿ ಸಂಪತ್ (ಬಜ್ಪೆ–ಮಳವೂರು, ಮಂಗಳೂರು) ಅವರನ್ನು ಆ.13ರಂದು ಬಂಧಿಸಲಾಗಿದೆ.

ಆರೋಪಿಗಳು ಬಲವಂತವಾಗಿ ತೆಗೆದುಕೊಂಡು ಹೋಗಿದ್ದ ಮೋಟಾರು ಸೈಕಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ಪೊಲೀಸರು ತನಿಖೆಯ ಸಂದರ್ಭದಲ್ಲಿ ವಶಕ್ಕೆ ಪಡೆದಿದ್ದಾರೆ.

ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಹಾಗೂ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಗೋಪಿಕೃಷ್ಣ ಅವರ ಮಾರ್ಗದರ್ಶನದಲ್ಲಿ, ತನಿಖಾಧಿಕಾರಿ ಅಶೋಕ ಮಾಳಾಬಗಿ ನೇತೃತ್ವದಲ್ಲಿ ಸಿಬ್ಬಂದಿ ಕಿರಣ್ ಮತ್ತು ಸಿದ್ದಪ್ಪ ಸಕೆನಳ್ಳಿ ಕಾರ್ಯಾಚರಣೆ ನಡೆಸಿದ್ದಾರೆ.