ಉಡುಪಿ : ಮಲ್ಪೆ ಬಂದರಿನಲ್ಲಿ ದಿನನಿತ್ಯ ಸಾವಿರಾರು ಮೀನುಗಾರಿಕಾ ಬೋಟ್‌ಗಳು ಮೀನು ಖಾಲಿ ಮಾಡಿ, ಡೀಸೆಲ್, ನೀರು ಹಾಗೂ ಐಸ್ ತುಂಬಿಕೊಳ್ಳಲು ಓಡಾಡುತ್ತಿದ್ದು, ಬಂದರಿನಲ್ಲಿ ಭಾರೀ ಒತ್ತಡ ಉಂಟಾಗಿದೆ. ಇಂತಹ ಪರಿಸ್ಥಿತಿಯ ನಡುವೆಯೇ ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತ ಬಂದರಿನ ಒಳಭಾಗದಲ್ಲೇ ಪ್ರವಾಸಿಗರ ಬೋಟ್‌ಗಳಿಗೆ ಅನುಮತಿ ನೀಡಿರುವುದು ಸ್ಥಳೀಯ ಮೀನುಗಾರರ ತೀವ್ರ ವಿರೋಧಕ್ಕೆ ಕಾರಣವಾಗಿದೆ.

ಮಲ್ಪೆ ಬಂದರಿನಲ್ಲಿ ಈಗಾಗಲೇ ಎರಡು ಸಾವಿರಕ್ಕೂ ಅಧಿಕ ಮೀನುಗಾರಿಕಾ ಬೋಟ್‌ಗಳಿದ್ದು, ಜಾಗದ ಕೊರತೆಯಿಂದ ದಿನದಿಂದ ದಿನಕ್ಕೆ ಬೋಟ್‌ಗಳ ನಡುವೆ ಡಿಕ್ಕಿ ಹೊಡೆದು ಹಾನಿಯಾಗುವ ಘಟನೆಗಳು ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ಪ್ರವಾಸಿಗರ ಬೋಟ್ ಸಂಚಾರ ಹೆಚ್ಚಾದರೆ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿದ್ದು, ಪ್ರವಾಸಿಗರ ಪ್ರಾಣಾಪಾಯಕ್ಕೂ ಕಾರಣವಾಗಬಹುದು. ಒಂದು ವೇಳೆ ಅಪಘಾತ ಸಂಭವಿಸಿದರೆ ಇದಕ್ಕೆ ಯಾರು ಹೊಣೆ ಎನ್ನುವ ಪ್ರಶ್ನೆಯನ್ನು ಮೀನುಗಾರರು ಎತ್ತಿದ್ದಾರೆ.
ಇದಲ್ಲದೆ, ಪ್ರವಾಸಿಗರ ಬೋಟ್‌ಗೆ ಯಾವುದೇ ಮೀನುಗಾರಿಕಾ ಬೋಟ್ ಡಿಕ್ಕಿ ಹೊಡೆದರೆ, ಪ್ರಕರಣವನ್ನು ಮೀನುಗಾರರು ಅಥವಾ ಬೋಟ್ ಮಾಲಕರ ಮೇಲೆ ದಾಖಲಿಸುವ ಸಾಧ್ಯತೆ ಇದ್ದು, ಇದರಿಂದ ಮೀನುಗಾರರಿಗೆ ತೀವ್ರ ಸಮಸ್ಯೆ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ತಕ್ಷಣವೇ ಬಂದರಿನ ಒಳಗೆ ಪ್ರವಾಸಿಗರ ಬೋಟ್‌ಗಳಿಗೆ ನೀಡಿರುವ ಪರವಾನಿಗೆಯನ್ನು ರದ್ದುಪಡಿಸಬೇಕು ಹಾಗೂ ಮುಂದೆ ಯಾವುದೇ ಪ್ರವಾಸಿಗರ ಬೋಟ್‌ಗಳಿಗೆ ಅವಕಾಶ ನೀಡಬಾರದೆಂದು ಸಮಸ್ತ ಬಂದರಿನ ಮೀನುಗಾರರು ಒತ್ತಾಯಿಸಿದ್ದಾರೆ. ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಮೀನುಗಾರರು ಎಚ್ಚರಿಕೆ ನೀಡಿದ್ದಾರೆ.



