ಕಾರ್ಕಳ : ಬೈಲೂರು ಪರಶುರಾಮ ಥೀಂ ಪಾರ್ಕ್ ನ ಬಾಗಿಲನ್ನು ಒಡೆದು ಒಳನುಗ್ಗಿದ ದುಷ್ಕರ್ಮಿಗಳು ಮೇಲ್ಛಾವಣಿಗೆ ಅಳವಡಿಸಿದ್ದ ತಾಮ್ರದ ಹೊದಿಕೆಯನು ಕಿತ್ತು ಕಳ್ಳತನ ಮಾಡಿದ್ದಾರೆ ಎಂದು ಶಾಸಕ ಸುನಿಲ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸುನಿಲ್ ಕುಮಾರ್, ಕಾರ್ಕಳದ ಇತಿಹಾಸದಲ್ಲಿ ಇದೊಂದು ದುರ್ದಿನ ಎಂದು ಭಾವಿಸುತ್ತೇನೆ. ನಮ್ಮ ಕ್ಷೇತ್ರವನ್ನು ರಾಜ್ಯದ ಶ್ರೇಷ್ಠ ಪ್ರವಾಸಿ ತಾಣವಾಗಿ ರೂಪಿಸಬೇಕೆಂಬ ಕನಸಿನೊಂದಿಗೆ ಪ್ರಾರಂಭಿಸಿದ ಈ ಮಹತ್ವಾಕಾಂಕ್ಷಿ ಯೋಜನೆ ಸ್ಥಳೀಯ ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿಯವರ ದ್ವೇಷ ಹಾಗೂ ಅಸೂಯೆಯ ರಾಜಕಾರಣಕ್ಕೆ ಬಲಿಯಾಗಿ ಹೋಯ್ತು. ಕಳೆದ ಎರಡು ವರ್ಷದಿಂದ ಈ ಯೋಜನೆಯ ಅಭಿವೃದ್ಧಿಗೆ ಬಿಡಿಕಾಸು ಬಿಡುಗಡೆಯಾಗದಂತೆ ಮಾಡಿ ಪರಶುರಾಮ ಥೀಂ ಪಾರ್ಕ್ ಅಕ್ಷರಶಃ ಪಾಳು ಬಿದ್ದು ಹೋಗುವಂತೆ ಮಾಡಿದ್ದಾರೆ. ಪ್ರವಾಸಿಗರು, ವಿದ್ಯಾರ್ಥಿಗಳು ಭೇಟಿ ಕೊಟ್ಟು ನಳನಳಿಸಬೇಕಿದ್ದ ಈ ಪ್ರವಾಸಿ ತಾಣ ಕಾಂಗ್ರೆಸ್ ನಾಯಕರ ರಾಜಕೀಯದಾಟದಿಂದಾಗಿ ಇಂದು ಕಳ್ಳರು ನುಗ್ಗಿ ಮೇಲ್ಛಾವಣಿಯನ್ನೇ ಕದ್ದೊಯ್ಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬರೆದುಕೊಂಡಿದ್ದಾರೆ.
ಬಹುಶಃ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಉದಯ ಕುಮಾರ್ ಶೆಟ್ಟಿಯವರ ಹೊಟ್ಟೆ ಇಂದು ತಣ್ಣಗಾಗಿರಬಹುದು. ಮುಂದಿನ ಚುನಾವಣೆಯವರೆಗೂ ಪರಶುರಾಮ ಥೀಂ ಪಾರ್ಕ್ ಯೋಜನೆಯನ್ನು ಜೀವಂತವಾಗಿ ಇಡಬೇಕೆಂದು ಕಾರ್ಕಳಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಕಾರ್ಕಳ ಕಾಂಗ್ರೆಸ್ ಪಟಾಲಂಗೆ ಫತ್ವಾ ಕೊಟ್ಟಿದ್ದರು.
ಅದರ ಫಲವಾಗಿ ಘಜ್ನಿ, ಘೋರಿಗಳು ಹಿಂದು ಶ್ರದ್ಧಾ ಕೇಂದ್ರಗಳನ್ನು ಧ್ವಂಸ ಮಾಡಿದ ರೀತಿ ಥೀಂ ಪಾರ್ಕ್ ನಲ್ಲಿ ಕಳ್ಳತನವನ್ನೂ ನಡೆಸಿ ಪಾಳು ಬೀಳಿಸಿದರು. ಅಷ್ಟಕ್ಕೂ ಈ ಪ್ರಕರಣದಲ್ಲಿ ಜಿಲ್ಲಾಡಳಿತದ ವೈಫಲ್ಯ ಎದ್ದು ಕಾಣುತ್ತಿದೆ. ಥೀಂ ಪಾರ್ಕ್ ಗೆ ಸಾರ್ವಜನಿಕ ಪ್ರವೇಶವನ್ನು ನಿರಾಕರಿಸಿ (ಸೆ.2023) ಸ್ಥಳೀಯ ಆಡಳಿತ ಆದೇಶ ಹೊರಡಿಸಿದ್ದರೂ ಕೆಲವರು ಕಾನೂನು ಬಾಹಿರವಾಗಿ ಅಲ್ಲಿಗೆ ನುಗ್ಗಿ ವಿಡಿಯೋ ಚಿತ್ರೀಕರಣ ನಡೆಸಿದ್ದರು.
ಇದೆಲ್ಲದರ ಮಧ್ಯೆಯೇ ಕಳ್ಳತನ ನಡೆದಿದೆ. ಈ ಹಿನ್ನೆಲೆಯಲ್ಲಿ ವಿಡಿಯೋ ಮಾಡಿದವರನ್ನೂ ವಿಚಾರಣೆಗೆ ಒಳಪಡಿಸುವ ಜತೆಗೆ ಕಳ್ಳತನ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸುತ್ತೇನೆ. ಕಾರ್ಕಳದ ಪ್ರವಾಸೋದ್ಯಮಕ್ಕೆ ಕೊಳ್ಳಿ ಇಟ್ಟ ಕಾಂಗ್ರೆಸ್ ನಾಯಕರನ್ನು ಇತಿಹಾಸ ಕ್ಷಮಿಸದು ಎಂದು ಸುನಿಲ್ ಕುಮಾರ್ ಪೋಸ್ಟ್‌ನಲ್ಲಿ ಹಾಕಿರುವ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.





