ಮಂಗಳೂರು : ಗರೋಡಿ ಶ್ರೀ ಬ್ರಹ್ಮ ಬೈದರ್ಕಳ ಕ್ಷೇತ್ರದ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ಕೋಳಿ ಅಂಕ ಬಗ್ಗೆ ಬಿ ಕೆ ಹರಿಪ್ರಸಾದ್ ರವರಿಗೆ ಮಾಹಿತಿ ಇರಲಿಲ್ಲ. ಆದರೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ನಡೆಸುತ್ತಿರುವ ಅಪಪ್ರಚಾರ ಕೂಡಲೇ ನಿಲ್ಲಿಸಬೇಕೆಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡ ನವೀನ್ ಸಾಲಿಯಾನ್ ಹೇಳಿದ್ದಾರೆ.
ಇಂದು ಈ ವಿಷಯದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ಕೋಳಿ ಅಂಕವನ್ನು ಪೊಲೀಸ್ ಬಲದ ಹರಿಪ್ರಸಾದ್ ರವರು ತಡೆಯಲು ಹೊರಟಿದ್ದಾರೆ ಎಂದು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ, ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಆದರೆ, ಈ ವಿಚಾರವೇ ಅವರ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ.
ಕೋಳಿ ಅಂಕದ ಸಂಬಂಧ ಯಾವುದೇ ವ್ಯಕ್ತಿಗಳಾಗಲೀ, ಸಂಘಟನೆಯವರಾಗಲೀ, ಇಲಾಖೆಯವರಾಗಲೀ ಅವರ ಜೊತೆ ಮಾತುಕತೆಯನ್ನೆ ಮಾಡಿರುವುದಿಲ್ಲ. ಹಾಗಾಗಿ ಅದನ್ನು ತಡೆಯುವ ಅಥವಾ ಬೆಂಬಲಿಸುವ ಪ್ರಶ್ನೆಯೇ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅವರು ಶ್ರೀ ನಾರಾಯಣ ಗುರುಗಳು ಬೋಧಿಸಿದ ತತ್ವಾದರ್ಶಗಳಂತೆ ಬದುಕುವವರು . ಶ್ರೀ ನಾರಾಯಣ ಗುರು-ಗಾಂಧಿ-ಅಂಬೇಡ್ಕರ್ ಹಾದಿಯಲ್ಲಿ ಅವರು ರಾಜಕಾರಣ ಮಾಡುತ್ತಾ ಬಂದಿದ್ದಾರೆ. ಇಂತಹ ಸುಳ್ಳು ಅಪಪ್ರಚಾರಗಳಿಗೆ ಅವರು ಯಾವುದೇ ಕಾರಣಕ್ಕೂ ಹೆದರುವುದಿಲ್ಲ.ಕರಾವಳಿಯ ಮೂಢನಂಬಿಕೆ ರಹಿತ, ಜೂಜು ರಹಿತ, ಅಸ್ಪೃಶ್ಯತೆ, ಅಸಮಾನತೆ ರಹಿತ ಎಲ್ಲ ಸಂಸ್ಕೃತಿ, ಸಂಪ್ರದಾಯ, ಆಚರಣೆಗಳನ್ನು ಇಲ್ಲಿಯ ತನಕ ಬೆಂಬಲಿಸುತ್ತಲೇ ಬಂದಿದ್ದಾರೆ. ಸೌಹಾರ್ದತೆಯ ಸಂದೇಶ ಸಾರುವ ಆಚರಣೆಗಳನ್ನು ಮುಂದೆಯೂ ಖಂಡಿತವಾಗಿಯೂ ಬೆಂಬಲಿಸುತ್ತಲೇ ಇರುತ್ತಾರೆ ಎಂದು ಯುವ ಕಾಂಗ್ರೆಸ್ ಮುಖಂಡ ನವೀನ್ ಸಾಲಿಯಾನ್ ತಿಳಿಸಿದ್ದಾರೆ.





