Home Crime ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣ : ಅಂತಿಮ ವರದಿ ಸಲ್ಲಿಸಲು ಎಸ್‌ಐಟಿಗೆ ನ್ಯಾಯಾಲಯದಿಂದ ನಿರ್ದೇಶನ…!!

ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣ : ಅಂತಿಮ ವರದಿ ಸಲ್ಲಿಸಲು ಎಸ್‌ಐಟಿಗೆ ನ್ಯಾಯಾಲಯದಿಂದ ನಿರ್ದೇಶನ…!!

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕ್ರಮಕ್ಕಾಗಿ ಎಸ್‌ಐಟಿಯು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿರುವ ವರದಿಯ ಆಧಾರದಲ್ಲಿ ಯಾವುದೇ ಆದೇಶ ಬೆಳ್ತಂಗಡಿ ನ್ಯಾಯಾಲಯವು ತನಿಖೆ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸುವಂತೆ ಎಸ್‌ಐಟಿಗೆ ನಿರ್ದೇಶನ ನೀಡಿ ಅದರ ಬಳಿಕ ಮುಂದಿನ ಕ್ರಮದ ಕುರಿತು ತಿಳಿಸಿದೆ.

ಎಸ್‌ಐಟಿಯು ನ. 20ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ಚಿನ್ನಯ್ಯ ಸಹಿತ 6ಮಂದಿಯನ್ನು ಆರೋಪಿಗಳನ್ನಾಗಿ ಉಲ್ಲೇಖಿಸಿ ವರದಿ ನೀಡಿದ್ದು, ತನಿಖೆಯ ವಿವರವನ್ನು ದಾಖಲಿಸಿ ಮುಂದಿನ ತನಿಖೆಗೆ ಮಾರ್ಗದರ್ಶನ ನೀಡುವಂತೆ ಎಸ್‌ಐಟಿ ಪರ ಸಹಾಯಕ ಸರಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ ಅವರು ವಾದ ಮಂಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿ ಕಾನೂನು ಕ್ರಮಕ್ಕಾಗಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದರು.

ಎಸ್‌ಐಟಿ ಅಧಿಕಾರಿಗಳು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ(ಬಿಎನ್‌ಎಸ್‌ಎಸ್)ನ ಸೆಕ್ಷನ್ 215ರಡಿ ಸುಳ್ಳು ಸಾಕ್ಷಿಯ ಅಪರಾಧಕ್ಕಾಗಿ ಕಾನೂನು ಕ್ರಮಕ್ಕೆ ವಿನಂತಿಸಿ ಆರೋಪಿಗಳ ವಿರುದ್ಧ 3923 ಪುಟಗಳ ವರದಿಯನ್ನು ಸಲ್ಲಿಸಿದ್ದರು. ಎಸ್‌ಐಟಿ ಪರ ವಕೀಲರು ಕೆಲವೊಂದು ಮಹತ್ವದ ಅಂಶಗಳನ್ನು ನ್ಯಾಯಾಲಯದ ಮುಂದಿಟ್ಟು ಮುಂದಿನ ಕಾನೂನು ಕ್ರಮಕ್ಕಾಗಿ ವಿನಂತಿಸಿದ್ದರು. ಡಿ. 9ರಂದು ವರದಿಗೆ ಸಂಬಂಧಿಸಿ ನ್ಯಾಯಾಲಯದಲ್ಲಿ ವಾದ-ಪ್ರತಿವಾದಗಳು ನಡೆದು ನ್ಯಾಯಾಧೀಶರು ವಿಚಾರಣೆಯನ್ನು ಪೂರ್ಣಗೊಳಿಸಿ ಆದೇಶವನ್ನು ಕಾಯ್ದಿರಿಸಿದ್ದರು.

ಪ್ರಾರಂಭದಲ್ಲಿ ಡಿ. 26ಕ್ಕೆ ಆದೇಶದ ದಿನ ಕಾದಿರಿಸಿದ್ದು, ಬಳಿಕ ಅದನ್ನು ಡಿ. 29 ಹಾಗೂ ಜ. 3ಕ್ಕೆ ಮುಂದೂಡಿದ್ದರು. ಶನಿವಾರ ಪ್ರಕರಣವನ್ನು ಕೈಗೆತ್ತಿಕೊಂಡ ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ವಿಜಯೇಂದ್ರ ಟಿ.ಎಚ್. ಅವರು ಎಸ್‌ಐಟಿಯು ವರದಿ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಪ್ರಾಥಮಿಕ ವರದಿ ಸಲ್ಲಿಸಲಾಗಿದೆ ತನಿಖೆ ಪೂರ್ಣಗೊಂಡಿಲ್ಲ ಎಂಬ ಅಂಶದ ಆಧಾರದಲ್ಲಿ ನ್ಯಾಯಾಧೀಶರು ತನಿಖೆ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸಲು ಆದೇಶ ನೀಡಿದ್ದಾರೆ.

ಎಸ್‌ಐಟಿ ಅಂತಿಮ ವರದಿಗೆ ಸಂಬಂಧಿಸಿ ಮತ್ತೆ ಜ. 23ಕ್ಕೆ ವಿಚಾರಣೆ ನಡೆಯಲಿದ್ದು, ಹೀಗಾಗಿ ಎಸ್‌ಐಟಿ ಅಧಿಕಾರಿಗಳು ಮತ್ತೆ ತನಿಖೆ ಆರಂಭಿಸಿ ಜ. 23ಕ್ಕೆ ಅಂತಿಮ ವರದಿ ಸಲ್ಲಿಸುತ್ತಾರೋ ಅಥವಾ ಮತ್ತೆ ಸಮಯಾವಕಾಶ ಕೇಳುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಎಸ್‌ಐಟಿ ಪರ ಸಹಾಯಕ ಸರಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ, ಎಸ್‌ಐಟಿ ಎಸ್ಪಿ ಸಿ.ಎ.ಸೈಮನ್, ಡಿವೈಎಸ್ಪಿ ಲೋಕೇಶ್ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.

ಧರ್ಮಸ್ಥಳದ ಪರ ಅರ್ಜಿ: ಜ. 14ಕ್ಕೆ ಮುಂದಿನ ವಿಚಾರಣೆ ಬುರುಡೆ ಪ್ರಕರಣದಲ್ಲಿ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎಂಬ ಅಂಶಗಳು ಎಸ್‌ಐಟಿ ತನಿಖೆಯ ವರದಿಯಲ್ಲಿ ದಾಖಲಾಗಿರುವುದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ದೇಗುಲವನ್ನು ಸಂತ್ರಸ್ತ ಎಂದು ಪರಿಗಣಿಸುವಂತೆ ಧರ್ಮಸ್ಥಳ ಕ್ಷೇತ್ರದ ಪರ ವಕೀಲರ ತಂಡ ಬೆಳ್ತಂಗಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಅದಕ್ಕೆ ಸಂಬಂಧಿಸಿ ವಕೀಲರು ಶನಿವಾರ ವಾದ ಮಂಡಿಸಿದ್ದಾರೆ. ಅದರ ವಿಚಾರಣೆಯನ್ನು ಜ. 14ಕ್ಕೆ ಮುಂದೂಡಲಾಗಿದೆ.

ಡಿ. 21ರಂದು ಹಿರಿಯ ನ್ಯಾಯವಾದಿ ಸಿ.ವಿ.ನಾಗೇಶ್ ಅವರು ಧರ್ಮಸ್ಥಳದ ಪರ ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದು, ಅದನ್ನು ಜ. 3ಕ್ಕೆ ಮುಂದೂಡಲಾಗಿತ್ತು. ಶನಿವಾರ ಧರ್ಮಸ್ಥಳ ಪರ ನ್ಯಾಯವಾದಿ ರಾಜಶೇಖರ್ ಹಾಗೂ ತಂಡವರು ವಾದ ಮಂಡಿಸಿದರು.

ಈ ಕುರಿತು ಧರ್ಮಸ್ಥಳದ ಪರ ನ್ಯಾಯವಾದಿ ಕೇಶವ ಗೌಡ ಬೆಳಾಲು ಅವರು ಪ್ರತಿಕ್ರಿಯಿಸಿ, ಶ್ರೀ ಕ್ಷೇತ್ರ ಧರ್ಮಸ್ಥಳ ದೇಗುಲವನ್ನು ಸಂತ್ರಸ್ತ ಎಂದು ಪರಿಗಣಿಸುವಂತೆ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ಹೆಚ್ಚಿನ ವಿಚಾರಣೆಗೆ ಜ. 14ಕ್ಕೆ ದಿನಾಂಕ ನೀಡಿದೆ. ಧರ್ಮಸ್ಥಳ ಕ್ಷೇತ್ರವು ಆರೋಪಗಳಿಂದ ಸಾಕಷ್ಟು ನೊಂದಿದ್ದು, ಹೀಗಾಗಿ ಸಂತ್ರಸ್ಥ ಎಂದು ಪರಿಗಣಿಸಿ ವಿಚಾರಣೆಯಲ್ಲಿ ನಮಗೂ ಅವಕಾಶ ನೀಡುವಂತೆ ಅರ್ಜಿ ಸಲ್ಲಿಸಿದ್ದೇವೆ. ವಿಚಾರಣೆಯ ಬಳಿಕ ನ್ಯಾಯಾಲಯ ಆದೇಶ ನೀಡಲಿದೆ. ಜತೆಗೆ ಎಸ್‌ಐಟಿಯು ಹಾಲಿ ಸಲ್ಲಿಕೆ ಮಾಡಿರುವ ಬಿಎನ್‌ಎಸ್‌ಎಸ್ ಸೆಕ್ಷನ್ 215ರಡಿ ವರದಿಗೆ ಆದೇಶ ನೀಡಲು ಸಾಧ್ಯವಿಲ್ಲ, ತನಿಖೆ ಪೂರ್ಣಗೊಳಿಸಲು ನಿರ್ದೇಶನ ನೀಡಿದೆ. ಶನಿವಾರ ಬೆಳಗ್ಗೆ ಬೆಂಗಳೂರಿನ ಹಿರಿಯ ವಕೀಲರೊಬ್ಬರು ಬೆಳ್ತಂಗಡಿ ನ್ಯಾಯಾಲಯಕ್ಕೆ ಬಂದು ಅರ್ಜಿ ಹಾಕಿ ಮಧ್ಯಾಹ್ನ ಹಿಂದಕ್ಕೆ ಪಡೆದಿದ್ದಾರೆ. ಯಾವುದೇ ಪ್ರತಿಕ್ರಿಯೆ ಇಲ್ಲದೆ ಅರ್ಜಿ ಹಿಂದಕ್ಕೆ ಪಡೆದಿರುವುದು ಯಾಕೆ ಎಂಬುದು ಗೊತ್ತಾಗಿಲ್ಲ ಎಂದರು.

ತರಕಾರು ಅರ್ಜಿ ಸಲ್ಲಿಕೆ: ಜ. 23ಕ್ಕೆ ವಿಚಾರಣೆ ಎಸ್‌ಐಟಿ ಅಪೂರ್ಣ ವರದಿ ಸಲ್ಲಿಕೆ ಮಾಡಿದೆ ಎಂದು ಆರೋಪಿಸಿ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಕೆಯಾಗಿದ್ದು, ಈ ಕುರಿತು ವಾದ ಮಂಡಿಸಲು ಹಿರಿಯ ನ್ಯಾಯವಾದಿ ದೊರೆರಾಜು ಅವರು ಶನಿವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿದ್ದರು. ಈ ವೇಳೆ ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, ಡಿ. 25ಕ್ಕೆ ನಾವು ಅರ್ಜಿ ಹಾಕಿ ವಾದ ಮಂಡನೆಗೆ ಅವಕಾಶ ಕೇಳಿದ್ದು, ನಮ್ಮ ಅರ್ಜಿ ಸ್ವೀಕಾರವೂ ಆಗಿಲ್ಲ, ತಿರಸ್ಕೃತವೂ ಆಗಿರಲಿಲ್ಲ. ಹೀಗಾಗಿ ವಾದ ಮಂಡಿಸಲು ನ್ಯಾಯಾಧೀಶರಲ್ಲಿ ಸಮಯಾವಕಾಶ ಕೇಳಿದ್ದೆವು. ಪ್ರಾರಂಭದಲ್ಲಿ ಅವಕಾಶ ನೀರಾಕರಣೆಯಾದರೂ ಅರ್ಜಿ ತಿರಸ್ಕೃತಗೊಳ್ಳದೇ ಇರುವುದರಿಂದ ನಮಗೆ ವಾದ ಮಂಡಿಸಲು ಅವಕಾಶ ಇದೆ ಎಂದಾಗ ಶನಿವಾರ ಸಂಜೆ ವಾದಕ್ಕೆ ಅವಕಾಶ ನೀಡಿದ್ದು, ಬಳಿಕ ಅದು ಜ. 23ಕ್ಕೆ ಮುಂದೂಡಲ್ಪಟ್ಟಿದೆ. ಧರ್ಮಸ್ಥಳವನ್ನು ಸಂತ್ರಸ್ತ ಎಂದು ಪರಿಗಣಿಸುವ ಅರ್ಜಿ ಹಾಗೂ ಸಾಕ್ಷ್ಯಾಧಾರಗಳ ಕೊರತೆ ಇರುವ ಎಸ್‌ಐಟಿ ಅಪೂರ್ಣ ವರದಿಗೆ ನಮ್ಮ ತಕರಾರು ಇದೆ ಎಂದು ಅರ್ಜಿ ಸಲ್ಲಿಸಿದ್ದೇವೆ ಎಂದರು.

ಬಂಟ್ವಾಳದಲ್ಲಿ ಮುಂದಿನ ವಿಚಾರಣೆಗಳು ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ವಿಜಯೇಂದ್ರ ಟಿ.ಎಚ್. ಅವರು ತರಬೇತಿಗೆ ತೆರಳುತ್ತಿರುವುದರಿಂದ ಅವರು ವಿಚಾರಣೆ ನಡೆಸುತ್ತಿರುವ ಎಲ್ಲ ಪ್ರಕರಣಗಳು ಬಂಟ್ವಾಳ ನ್ಯಾಯಾಲಯಕ್ಕೆ ವರ್ಗಾವಣೆಗೊಳ್ಳಲಿದ್ದು, ಹೀಗಾಗಿ ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದ ಎಸ್‌ಐಟಿ ವರದಿ ಹಾಗೂ ಇತರ ಅರ್ಜಿಗಳು ಬಂಟ್ವಾಳ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿದೆ.