ಹಿರಿಯಡ್ಕ : ಭಾರತವು ಯುವ ಸಮುದಾಯದ ದೇಶವಾಗಿದ್ದು ಅವರನ್ನೇ ಗುರಿಯಾಗಿಸಿಕೊಂಡು ಹಾಗೂ ಅವರ ಭವಿಷ್ಯ ಹಾಳು ಮಾಡಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಡ್ರಗ್ಸ್ ಮಾಫಿಯಾಗಳು ತೊಡಗಿಕೊಂಡಿವೆ. ಪ್ರಮುಖವಾಗಿ ದೇಶದ ವಿದ್ಯಾರ್ಥಿಗಳನ್ನು ಮಾದಕ ವ್ಯಸನಗಳ ದಾಸರನ್ನಾಗಿಸಿ, ಅದರಿಂದ ಲಭಿಸುವ ಹಣವನ್ನು ಭಯೋತ್ಪಾದನೆಯಂತಹ ಕೃತ್ಯಗಳಿಗೆ ಬಳಸಲಾಗುತ್ತಿದೆ ಎಂದು ಬೆಂಗಳೂರಿನ ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ನ ಸಂಚಾಲಕರಾದ ಶ್ರೀ ಸಂದೇಶ್ ಆತಂಕ ವ್ಯಕ್ತಪಡಿಸಿದರು.
ಉಡುಪಿಯ ಹಿರಿಯಡ್ಕದ ಕರ್ನಾಟಕ ಪಬ್ಲಿಕ್ ಸ್ಕೂಲ್ ಕಾಲೇಜಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಉಡುಪಿ ತಾಲೂಕು, ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಆಶ್ರಯದಲ್ಲಿ ಬುಧವಾರ (ಡಿ.31) ಆಯೋಜಿಸಿದ್ದ ಸ್ವಾಸ್ಥ್ಯ ರಕ್ಷಣೆ ಸಂಕಲ್ಪದ ‘ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ಕಾರ್ಯಕ್ರಮ’ದಲ್ಲಿ ಮಾತನಾಡಿದರು.
ಪಾಲಕರ ಕಣ್ಣೀರು ಹಾಕದಿರಲಿ
ಕಾರ್ಯಕ್ರಮ ಉದ್ಘಾಟಿಸಿದ ಕೆಪಿಎಸ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮಂಜುನಾಥ್ ಭಟ್ ಮಾತನಾಡಿ, ಮಕ್ಕಳು ದುಶ್ಚಟಗಳ ದಾಸರಾಗಬಾರದು. ಪಾಲಕರು ಕಣ್ಣೀರು ಹಾಕುವಂತೆ ಮಾಡಬಾರದು. ಸೂಕ್ತ ಅಧ್ಯಯನದ ಕಡೆಗೆ ಗಮನವಹಿಸಿ ಶೈಕ್ಷಣಿಕ ಸಾಧನೆ ಮಾಡಬೇಕು. ಉನ್ನತ ಉದ್ಯೋಗ ಅಲಂಕರಿಸಿ, ಊರಿನ ಹಾಗೂ ಕಲಿತ ಶಾಲೆಯ ಕೀರ್ತಿ ಹೆಚ್ಚಿಸಬೇಕು. ಡ್ರಗ್ಸ್ಗೆ ಸಂಬಂಧಿಸಿ ಯಾವುದೇ ಮಾಹಿತಿ ತಮಗೆ ಲಭಿಸಿದರೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದರು.
ಯುವ ಸಮುದಾಯ ಡ್ರಗ್ಸ್ ಹಾಗೂ ಮದ್ಯಪಾನ ಚಟ ರೂಢಿಸಿಕೊಳ್ಳವ ರೀತಿ, ಅದರಿಂದಾಗುವ ದುಷ್ಪರಿಣಾಮದ ಕುರಿತು ಸ್ತಬ್ಧಚಿತ್ರಗಳ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಹಿರಿಯಡ್ಕ ಪೋಲಿಸ್ ಠಾಣೆಯ ಎಎಸ್ಐ ಶ್ರೀ ಗೋಪಾಲ್ ಮಾತನಾಡಿ, ದುಶ್ಚಟದಿಂದ ಆಗುವ ಅನಾಹುತ ಹಾಗೂ ಕಾನೂನಿನ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಶ್ರೀಕ್ಷೇತ್ರ ಧರ್ಮ ಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಉಡುಪಿ ತಾಲೂಕಿನ ಯೋಜನಾಧಿಕಾರಿ ಶ್ರೀ ಸುರೇಂದ್ರ ನಾಯ್ಕ್, ಜಿಲ್ಲಾ ಜನ ಜಾಗೃತಿ ವೇದಿಕೆಯ ಸದಸ್ಯರಾದ ಶ್ರೀ ಉಮೇಶ್ ಶೆಟ್ಟಿ, ನಿವೃತ್ತ ಉಪನ್ಯಾಸಕಿ ಹಾಗೂ ತಾಲೂಕು ಜನ ಜಾಗೃತಿ ವೇದಿಕೆಯ ಸದಸ್ಯರಾದ ಶ್ರೀಮತಿ ನಳಿನಾದೇವಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕಿನ ಅಧ್ಯಕ್ಷರು ಹಾಗೂ ಕೆಪಿಎಸ್ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ಶ್ರೀ ವಿಜಯ ಶೆಟ್ಟಿ ಕೊಂಡಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಿರಿಯಡ್ಕ ವಲಯದ ಮೇಲ್ವಿಚಾರಕರಾದ ಶ್ರೀ ರಾಜ್, ಬೊಮ್ಮರಬೆಟ್ಟು ಕಾರ್ಯಕೇತ್ರದ ಸೇವಾಪ್ರತಿನಿಧಿ ಪ್ರತಿಮಾ, ವಲಯದ ಒಕ್ಕೂಟಗಳ ಅಧ್ಯಕ್ಷರಾದ ಶ್ರೀ ಗಣೇಶ್ ನಾಯ್ಕ್, ಶೌರ್ಯ ವಿಪತ್ತು ತಂಡದ ಸದಸ್ಯೆ ಶ್ರೀಮತಿ ಸುಷ್ಮಾಕೆ., ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ನ ಸದಸ್ಯ ಶ್ರೀ ಉಮೇಶ್ ಪಕ್ಕಾಲು, ಶಾಲೆಯ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬೊಮ್ಮರಬೆಟ್ಟು ಕಾರ್ಯಕೇತ್ರದ ಸೇವಾಪ್ರತಿನಿಧಿ ಯಶೋದಾ ಸ್ವಾಗತಿಸಿದರು. ಶಾಲಾ ಅಧ್ಯಾಪಕರಾದ ಶ್ರೀ ದೇವದಾಸ್ ಪ್ರಭು ವಂದಿಸಿದರು.









