ಪುತ್ತೂರು : ಕೌಕ್ರಾಡಿ ಗ್ರಾಮದಲ್ಲಿ ಹಿರಿಯ ನಾಗರಿಕ ದಂಪತಿಯ ಮನೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ತಾಲೂಕು ಆಡಳಿತ ಸೌಧದ ಮುಂದೆ ನಡೆಯುತ್ತಿರುವ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅವರು ಗುರುವಾರ ಸಂಜೆ ಭೇಟಿ ನೀಡಿ, ಧರಣಿ ಸತ್ಯಾಗ್ರಹ ಹಿಂಪಡೆಯುವಂತೆ ಮನವಿ ಮಾಡಿದರು.
ಅಧಿಕಾರಿಗಳು ಮನೆ ಧ್ವಂಸಗೊಳಿಸಿದ ಹಿನ್ನಲೆ ನ್ಯಾಯಕ್ಕಾಗಿ ಒತ್ತಾಯಿಸಿ ವೃದ್ಧ ದಂಪತಿಗಳು ಪುತ್ತೂರು ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನಲೆ ಧರಣಿ ನಿರತರ ಬಳಿಗೆ ಬಂದ ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಆಗಮಿಸಿ ಧರಣಿ ಹಿಂಪಡೆಯುವಂತೆ ಮನವಿ ಮಾಡಿದರು.
ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ತನಿಖೆಗೆ ನಿರ್ದೇಶನ ನೀಡಲಾಗಿದೆ. 15 ದಿನಗಳ ಒಳಗೆ ರಿಪೋರ್ಟ್ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ತನಿಖೆ ವರದಿ ಬರುವ ತನಕ ಧರಣಿ ಬಿಟ್ಡು ತೆರಳುವಂತೆ ಸಹಾಯಕ ಆಯುಕ್ತರು ತಿಳಿಸಿದರು.
ಆದರೆ ಸಹಾಯಕ ಆಯುಕ್ತರ ಮನವಿ ತಿರಸ್ಕರಿಸಿದ ವೃದ್ಧ ದಂಪತಿಗಳು, ನಮ್ಮ ಮನೆಯನ್ನು ಕೆಡವಿ ಹಾಕಲಾಗಿದೆ. ಅಲ್ಲಿ ಹೋದರೂ ನಾವು ಇದೇ ರೀತಿ ಇರಬೇಕು, ಅಲ್ಲದೆ ಅಲ್ಲಿ ಕಾಡಾನೆಗಳ ಹಾವಳಿಯೂ ಇದೆ. ಇಲ್ಲಿ ಊಟವನ್ನು ಸ್ಥಳೀಯರು ತಂದು ಕೊಡುತ್ತಿದ್ದಾರೆ, ಅಲ್ಲಿ ಊಟಕ್ಕೂ ಗತಿಯಿಲ್ಲದ ಸ್ಥಿತಿ ಇದೆ. ತನಿಖಾ ವರದಿ ಬರುವ ತನಕ ಇಲ್ಲೇ ಇರುವುದಾಗಿ ಸಹಾಯಕ ಆಯುಕ್ತರ ಬಳಿ ವೃದ್ದ ದಂಪತಿಗಳು ತಿಳಿಸಿದ್ದಾರೆ.
ಪ್ರಕರಣದ ವಿವರ : ಮುತ್ತುಸ್ವಾಮಿ ಮತ್ತು ರಾಧಮ್ಮ ದಂಪತಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ನಿವಾಸಿಗಳು. ಕಳೆದ ಹಲವು ವರ್ಷಗಳಿಂದ ವ್ಯಕ್ತಿಯೊಬ್ಬರ ಸ್ವಾಧೀನದಲ್ಲಿದ್ದ ಭೂಮಿಯಲ್ಲಿ ವಾಸವಾಗಿದ್ದರು. 6 ವರ್ಷಗಳ ಕಾಲ ಜೋಪಡಿಯಲ್ಲೇ ಜೀವನ ಮಾಡಿದವ್ರು ನಂತ್ರ ಚಿಕ್ಕದೊಂದು ಮನೆ ಕಟ್ಕೊಂಡು ಬದುಕ್ತಿದ್ರು. ಆದರೆ ಕೌಕ್ರಾಡಿ ಗ್ರಾಮ ಪಂಚಾಯತ್ ಅಧಿಕಾರಿಗಳು ಇದು ಸರ್ಕಾರಕ್ಕೆ ಸೇರಿದ ಜಾಗ. ಅಕ್ರಮವಾಗಿ ಮನೆ ನಿರ್ಮಿಸಲಾಗಿದೆ 2024 ಡಿಸೆಂಬರ್ 11ರಂದು ಮನೆ ಧ್ವಂಸ ಮಾಡಿದ್ದಾರೆ. ಅಲ್ಲದೇ ಅಲ್ಲಿಂದ ತೆರವುಗೊಳಿಸಬೇಕೆಂದು ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಸಾರ್ವಜನಿಕ ದಾವೆ ಹೂಡಿದ್ದರು. ಹೀಗಾಗಿ ಯಾವ ಕಚೇರಿಗೆ ಹೋದ್ರೂ ಪ್ರಕರಣ ನ್ಯಾಯಾಲಯದಲ್ಲಿದೆ ಅಂತಾ ಸಬೂಬು ಹೇಳಿ ಕಳುಹಿಸಿದರಂತೆ.
ಇದೀಗ ಸಹಾಯಕ ಆಯುಕ್ತರ ಮನವಿಯನ್ನು ವೃದ್ದ ದಂಪತಿ ತಿರಸ್ಕರಿಸಿದ್ದು, ತಮಗೆ ಮನೆ ನಿರ್ಮಿಸಿ ಕೊಡೋವರೆಗು ಸಹಾಯಕ ಆಯುಕ್ತರ ಕಚೇರಿ ಮುಮದೆಯೇ ಧರಣಿ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
ಬೆಂಗಳೂರಿನ ಕೊಗಿಲು ಬಡಾವಣೆಯಲ್ಲಿ ಅಕ್ರಮವಾಗಿ ವಾಸಿಸುತ್ತಿರುವವರಿಗೆ ಸರಕಾರ ಮನೆ ಕೊಡಲು ಮುಂದಾಗಿದೆ. ಆದರೆ ದಕ್ಷಿಣಕನ್ನಡ ಜಿಲ್ಲೆಯ ಈ ವೃದ್ದ ದಂಪತಿಗಳ ವಿಚಾರದಲ್ಲಿ ಮಾತ್ರ ಮೌನ ವಹಿಸಿದೆ.



