ಪುತ್ತೂರು ಜ. 01: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕಸಬಾ ನಿವಾಸಿ ನಿವೃತ್ತ ಪ್ರಾಂಶುಪಾಲರಾದ ಎ.ವಿ ನಾರಾಯಣ (84) ಎಂಬವರ ಮನೆಯಲ್ಲಿ ಮಧ್ಯರಾತ್ರಿ ನಡೆದ ದರೋಡೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಪೊಲೀಸರು ಆರೋಪಿ ದಂಪತಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಡಿಸೆಂಬರ್ 17 ರಂದು ಮಧ್ಯರಾತ್ರಿ, ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಹೆಲ್ಮಟ್ ಧರಿಸಿಕೊಂಡು, ಮುಖಚಹರೆಯನ್ನು ಮರೆಮಾಚಿ, ನಾರಾಯಣ ಅವರ ಮನೆಯಿಂದ ಬೆಲೆ ಬಾಳುವ ಸೊತ್ತುಗಳನ್ನು ಕಳ್ಳತನ ಮಾಡಲು ಮನೆಯ ಹಿಂಬಾಗಿಲಿನಿಂದ ಮನೆಗೆ ಪ್ರವೇಶಿಸಿದ್ದರು. ಈ ಸಂದರ್ಭ ದರೋಡೆಕೋರರು ನಾರಾಯಣ ಹಾಗೂ ಅವರ ಪತ್ನಿಯನ್ನು ಬೆದರಿಸಿದ್ದು, ಈ ವೇಳೆ ನಡೆದ ತಳ್ಳಾಟದಲ್ಲಿ ನಾರಾಯಣ ಅವರ ಪತ್ನಿಗೆ ಗಾಯವಾಗಿತ್ತು. ನಾರಾಯಣ ಅವರು ಜೋರಾಗಿ ಕಿರುಚಿದ ಪರಿಣಾಮ ಹೆದರಿದ ದರೋಡೆಕೋರರು ಯಾವುದೇ ವಸ್ತುಗಳನ್ನು ಕಳವು ಮಾಡದೆ ಮನೆಯ ಹಿಂಬಾಗಿಲಿನಿಂದ ಎಸ್ಕೆಪ್ ಆಗಿದ್ದರು.
ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 127/2025, ಕಲಂ: 307 ಜೊತೆಗೆ 3(5) ಬಿ ಎನ್ ಎಸ್ 2023 ರಂತೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪುತ್ತೂರು ನಗರ ಪೊಲೀಸರು ಆರೋಪಿಗಳಾದ ಪುತ್ತೂರು, ಮುಡೂರು ನಿವಾಸಿ (ಪ್ರಸ್ತುತ ಬಾಡಿಗೆ ಮನೆ ವಾಸ:ಪಂಜ) ಕಾರ್ತಿಕ್ ರಾವ್ (ಪ್ರಾಯ:31) ಮತ್ತು ಆತನ ಪತ್ನಿ ಕೆ.ಎಸ್. ಸ್ವಾತಿ ರಾವ್ (25) ಎಂಬವರುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಮೋಟಾರು ಸೈಕಲ್‌ನ್ನು ವಶಕ್ಕೆ ಪಡೆದಿರುತ್ತಾರೆ. ಸದ್ರಿ ಆರೋಪಿ ಕಾರ್ತಿಕ್ ರಾವ್ ಸಹಾಯಕ ಅರ್ಚಕರಾಗಿ ಕೆಲಸ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.




