ಬೆಳ್ತಂಗಡಿ : ಧರ್ಮಸ್ಥಳಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಅಪಾರ. ಆದರೆ ಈ ಭಕ್ತಾದಿಗಳಿಗೆ ಸೈಬರ್ ವಂಚಕರ ಕಾಟ ಎದುರಾಗಿದ್ದು ಈ ಸಂಬಂಧ ಇದೀಗ ಸ್ವತಃ ಶ್ರೀ ಕ್ಷೇತ್ರ ಧರ್ಮಸ್ಥಳದ ಆಡಳಿತ ಮಂಡಳಿ ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಸಂದೇಶ ಹೊರಡಿಸಿದೆ. ವಸತಿ ಗೃಹಗಳ ಬುಕ್ಕಿಂಗ್ ಹೆಸರಿನಲ್ಲಿ ತೆರೆದುಕೊಂಡಿರುವ ನಕಲಿ ವೆಬ್ಸೈಟ್ ಜಾಲಗಳ ಬಗ್ಗೆ ಭಕ್ತಾದಿಗಳನ್ನು ಎಚ್ಚರಿಸಿದೆ.
ಈ ಸಂಬಂಧ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ದೇವಸ್ಥಾನದ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ.
ನಕಲಿ ವೆಬ್ಸೈಟ್ಗಳು, ಫೋನ್ ಕರೆಗಳು ಅಥವಾ ವಾಟ್ಸಾಪ್ ಸಂದೇಶಗಳ ಮೂಲಕ ನಡೆಯುವ ನಕಲಿ ವಸತಿಗೃಹಗಳ ಬುಕ್ಕಿಂಗ್ ಬಗ್ಗೆ ಎಚ್ಚರಿಕೆಯಿಂದಿರಿ.
ಶ್ರೀ ಕ್ಷೇತ್ರ ಧರ್ಮಸ್ಥಳದ ಅತಿಥಿ ಗೃಹಗಳ ಮುಂಗಡ ಕಾಯ್ದಿರಿಸುವಿಕೆ ಕೇವಲ ಅಧಿಕೃತ ವೆಬ್ಸೈಟ್ http://www.shridharmasthala.org ಮೂಲಕ ಮಾತ್ರ ಮಾಡಬಹುದಾಗಿದೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಆ್ಯಪ್ ಅಥವಾ ಪ್ಲಾಟ್‌ಫಾರ್ಮ್‌ಗಳ ಮೂಲಕ ಬುಕ್ಕಿಂಗ್ ಮಾಡಲು ಅವಕಾಶವಿರುವುದಿಲ್ಲ ಎಂದು ಸಂದೇಶ ರವಾನಿಸಿದೆ.



