ಕೋಟ: ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಶ್ರದ್ಧಾ ಸ್ಟೋರ್ ಕೈಲ್‌ಕೇರಿ, ಮಾವಿನಕಟ್ಟೆ ನಿವಾಸಿ ಭಾರತಿ (45) ಅವರು ತಮ್ಮ ಮನೆಯಲ್ಲಿ ಇರಿಸಿದ್ದ ಸುಮಾರು 320 ಗ್ರಾಂ ತೂಕದ, ಅಂದಾಜು ₹30 ಲಕ್ಷ ಮೌಲ್ಯದ ಚಿನ್ನಾಭರಣಗಳು ಕಳುವಾಗಿರುವ ಬಗ್ಗೆ ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಜೂನ್ 1ರಂದು ಮದುವೆ ಕಾರ್ಯಕ್ರಮದಿಂದ ಮನೆಗೆ ಮರಳಿದ ಬಳಿಕ ಚಿನ್ನಾಭರಣಗಳನ್ನು ಗೋಡ್ರೇಜ್‌ನಲ್ಲಿ ಇರಿಸಲಾಗಿತ್ತು. ಜುಲೈ 27ರಂದು ಬೆಳಿಗ್ಗೆ ಗೋಡ್ರೇಜ್ ತೆರೆದು ನೋಡಿದಾಗ ಚಿನ್ನಾಭರಣಗಳು ಕಾಣೆಯಾಗಿದ್ದವು. ಮನೆಯೆಲ್ಲಾ ಹುಡುಕಿದರೂ ಅವು ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ಪ್ರಕಾರ, ಏಳು ಚಿನ್ನದ ಬಳೆಗಳು, ಏಳು ಉಂಗುರಗಳು, ಏಳು ಜೋಡಿ ಕಿವಿಯೋಲೆಗಳು, ಒಂದು ಜೋಡಿ ಜುಮಕಿ, ಮೂರು ಬ್ರಾಸ್ ಲೈಟ್‌ಗಳು, ಒಂದು ಕರಿಮಣಿ ಸರ, ಒಂದು ನೆಕ್ಲೇಸ್, ಒಂದು ಮುತ್ತಿನ ಸರ, ಒಂದು ಕೆಂಪು ಹರಳಿನ ಸರ ಹಾಗೂ ಎರಡು ಚಿನ್ನದ ಚೈನ್‌ಗಳು ಸೇರಿದಂತೆ ಒಟ್ಟು ಸುಮಾರು 320 ಗ್ರಾಂ ಚಿನ್ನಾಭರಣ ಕಳುವಾಗಿದೆ.
ಈ ಪ್ರಕರಣದಲ್ಲಿ ಮನೆಯವರಿಗೆ ಪರಿಚಿತನಾಗಿರುವ ವ್ಯಕ್ತಿಯ ಮೇಲೆ ದೂರುದಾರರು ಸಂಶಯ ವ್ಯಕ್ತಪಡಿಸಿದ್ದು, ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




