Home Crime ಮಂಗಳೂರು : ಕುಪ್ಪೆಪದವು ಕಿಂಗ್ಸ್ ಹೊರಿಝೋನ್‌ನಲ್ಲಿ ಎರಡನೇ ಬಾರಿ ಅಗ್ನಿ ದುರಂತ…!!

ಮಂಗಳೂರು : ಕುಪ್ಪೆಪದವು ಕಿಂಗ್ಸ್ ಹೊರಿಝೋನ್‌ನಲ್ಲಿ ಎರಡನೇ ಬಾರಿ ಅಗ್ನಿ ದುರಂತ…!!

ಮಂಗಳೂರು : ತಾಲೂಕು ಕಿಲೆಂಜಾರು ಗ್ರಾಮದ ಕುಪ್ಪೆಪದವು ಎಂಬಲ್ಲಿನ ಕಿಂಗ್ಸ್ ಹೊರಿಝೋನ್ ವಾಣಿಜ್ಯ ಕಟ್ಟಡದ ಜಿನಸಿ ಅಂಗಡಿಯಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಅಗ್ನಿ ದುರಂತದಲ್ಲಿ ₹3 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.

ಕಿಂಗ್ಸ್ ಹೊರಿಝೋನ್ ವಾಣಿಜ್ಯ ಕಟ್ಟಡದ ನೆಲ ಅಂತಸ್ತಿನಲ್ಲಿ ಕೊಳವೂರು ರಹೀದಾ ಅವರಿಗೆ ಸೇರಿದ ಜಿನಸಿ ಅಂಗಡಿ ಕಾರ್ಯನಿರ್ವಹಿಸುತ್ತಿತ್ತು. ಕಳೆದ ಡಿಸೆಂಬರ್ ತಿಂಗಳಲ್ಲಿಯೂ ಇದೇ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಭಾರೀ ಅಗ್ನಿ ಅವಘಡ ಸಂಭವಿಸಿತ್ತು. ಬಳಿಕ ರಹೀದಾ ಅವರು ಇದೇ ಕಟ್ಟಡದ ಮತ್ತೊಂದು ಅಂಗಡಿಗೆ ವ್ಯವಹಾರ ಸ್ಥಳಾಂತರಿಸಿದ್ದರು. ಇದೀಗ ಸೋಮವಾರ ಮುಂಜಾನೆ ಆ ಅಂಗಡಿಯಲ್ಲಿಯೇ ಮತ್ತೆ ಬೆಂಕಿ ಕಾಣಿಸಿಕೊಂಡಿದೆ.

ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಜಿನಸಿ ಸಾಮಗ್ರಿಗಳು, ರೆಫ್ರಿಜರೇಟರ್ ಹಾಗೂ ಸುಮಾರು ₹50 ಸಾವಿರ ನಗದು ಸೇರಿದಂತೆ ₹3 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.

ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ಸಹಕರಿಸಿದ್ದಾರೆ. ಇದರಿಂದಾಗಿ ವಾಣಿಜ್ಯ ಕಟ್ಟಡದ ಮೇಲಂತಸ್ತಿನಲ್ಲಿರುವ ಮನೆಗಳಿಗೆ ಬೆಂಕಿ ಹರಡುವ ಸಾಧ್ಯತೆ ತಪ್ಪಿದ್ದು, ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಲಾಗಿದೆ.

ಇದೇ ಕಟ್ಟಡದಲ್ಲಿ ಪದೇಪದೇ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡಗಳು ಸಂಭವಿಸುತ್ತಿರುವುದು ಕಟ್ಟಡದ ವಿದ್ಯುತ್ ವ್ಯವಸ್ಥೆ ಹಾಗೂ ಒಟ್ಟಾರೆ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಕಟ್ಟಡದ ವಿದ್ಯುತ್ ಸಂಪರ್ಕ ಹಾಗೂ ಸುರಕ್ಷತಾ ವ್ಯವಸ್ಥೆಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.