ಮೂಡುಬೆಳ್ಳೆ: ಜ್ಞಾನಗಂಗಾ ಪದವಿ ಪೂರ್ವ ಕಾಲೇಜು, ನೆಲ್ಲಿಕಟ್ಟೆ, ರೋಟರಿ ಕ್ಲಬ್ ಮಣಿಪುರದ ಜಂಟಿ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮ ಕಾಲೇಜಿನಲ್ಲಿ ಅರ್ಥಪೂರ್ಣವಾಗಿ ನಡೆಯಿತು.
ಕಾರ್ಯಕ್ರಮವನ್ನು ರೋಟರಿ ಕ್ಲಬ್ ಮಣಿಪುರದ ಅಧ್ಯಕ್ಷರಾದ ಜಾನ್ ಸಿಕ್ವೇರಾ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರಕೃತಿ ಉಳಿವಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅತಿಥಿಗಳಾದ ರೋಟರಿ ಕ್ಲಬ್ ಮಣಿಪುರದ ಪೂರ್ವ ಸಂಯೋಜಕರಾದ ಗುರುರಾಜ್ ಭಟ್ ಮಾತನಾಡಿ, ಪರಿಸರ ಸಂರಕ್ಷಣೆ, ನೀರಿನ ಉಳಿವು ಹಾಗೂ ಆರೋಗ್ಯಕರ ಜೀವನಕ್ಕೆ ಮರಗಳ ಮಹತ್ವವನ್ನು ವಿವರಿಸಿದರು. ಜೊತೆಗೆ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಇನ್ನೋರ್ವ ಅತಿಥಿ, ಜನರಲ್ ಇನ್ಸುರೆನ್ಸ್ ಎಂಪ್ಲಾಯೀಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಉಡುಪಿಯ ಪ್ರಭಾರ ಕಾರ್ಯದರ್ಶಿ ಪ್ರಭಾಕರ್ ಕೆ.ಎಸ್. ಅವರು ಪರಿಸರ ರಕ್ಷಣೆಯೇ ಪ್ರತಿಯೊಬ್ಬರ ಮೂಲ ಕರ್ತವ್ಯವಾಗಿದ್ದು, ವಿದ್ಯಾರ್ಥಿಗಳು ಅದನ್ನು ತಮ್ಮ ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಮಣಿಪುರದ ಕಾರ್ಯದರ್ಶಿ ವಿಲ್ಫ್ರಿಡ್ ಮೆಂಡೋನ್ಕಾ ಹಾಗೂ ಜೋನಲ್ ಲೆಫ್ಟಿನೆಂಟ್ ಐಡಾ ಗಿಬ್ಬಾ ಡಿ’ಸೋಜಾ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀನಾ ಎಸ್. ನಾಯಕ್ ಅವರು ಅತಿಥಿಗಳಿಗೆ ಗಿಡಗಳನ್ನು ನೀಡಿ ಆತ್ಮೀಯವಾಗಿ ಸ್ವಾಗತಿಸಿದರು.ಕಾಲೇಜಿನ ಉಪಪ್ರಾಂಶುಪಾಲರು ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಭಾಸ್ಕರ್ ಆಚಾರ್ಯ ಅವರು ಧನ್ಯವಾದ ಸಮರ್ಪಿಸಿದರು.
ಜೀವಶಾಸ್ತ್ರ ಉಪನ್ಯಾಸಕಿ ಶ್ರೀಮತಿ ವಿನೋದ ಕಾರ್ಯಕ್ರಮವನ್ನು ನಿರೂಪಿಸಿದರು.
ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಾದ ಹರ್ಷಿಣಿ ಮತ್ತು ವರ್ಷಿಣಿ ಪ್ರಾರ್ಥನೆ ನೆರವೇರಿಸಿದರು. ವಿದ್ಯಾರ್ಥಿಗಳಾದ ಅಮಿತ್ ಹಾಗೂ ನೀಲಕಂಠ ರಸಪ್ರಶ್ನೆ ಸ್ಪರ್ಧೆ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು.
ಪರಿಸರ ಉಳಿದರೆ ಭವಿಷ್ಯ ಉಳಿಯುತ್ತದೆ ಎಂಬ ಸಂದೇಶದೊಂದಿಗೆ ವನಮಹೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನವಾಯಿತು.






ವರದಿ ಅನಿಲ್ ಮೂಡುಬೆಳ್ಳೆ




