Home Crime ಮಲಗಿದ್ದ ವ್ಯಕ್ತಿಯ ತಲೆಯ ಮೇಲೆ ಕಲ್ಲು ಹಾಕಿ ಕೊಲೆಗೈದ ಪ್ರಕರಣ : ಆರೋಪಿಗೆ ಶಿಕ್ಷೆ ಪ್ರಕಟ..!!

ಮಲಗಿದ್ದ ವ್ಯಕ್ತಿಯ ತಲೆಯ ಮೇಲೆ ಕಲ್ಲು ಹಾಕಿ ಕೊಲೆಗೈದ ಪ್ರಕರಣ : ಆರೋಪಿಗೆ ಶಿಕ್ಷೆ ಪ್ರಕಟ..!!

ಕುಂದಾಪುರ: ಮೂರು ವರ್ಷಗಳ ಹಿಂದೆ ಗಂಗೊಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಹರ್ಕೂರು ಎಂಬಲ್ಲಿ ಮಲಗಿದ್ದ ವ್ಯಕ್ತಿಯೊಬ್ಬರ ತಲೆಯ ಮೇಲೆ ಕಲ್ಲು ಹಾಕಿ ಕೊಲೆಗೈದ ಪ್ರಕರಣದ ಆರೋಪಿಗೆ ಕುಂದಾಪುರದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಜು.29ರಂದು ತೀರ್ಪು ನೀಡಿದೆ.

ಶಿಕ್ಷೆಗೊಳಗಾದ ಆರೋಪಿ ರಾಜು ಎಂದು ತಿಳಿದು ಬಂದಿದೆ.

2023ರ ಮೇ 14ರಂದು ಕುಂದಾಪುರ ತಾಲೂಕು ಹರ್ಕೂರು ಗ್ರಾಮದ ನಾಗರಾಜ ಆಚಾರಿ ಗಾರೆ ಕೆಲಸಕ್ಕಾಗಿ ಸಂಗೋದಪ್ಪ ಯಾನೆ ಸಂಗಮೇಶ ಎಂಬ ಮೇಸ್ತಿಯ ಮೂಲಕ ರಾಜು ಅವರನ್ನು ಕರೆದುಕೊಂಡು ಹೋಗಿದ್ದರು. ರಾತ್ರಿ ಸಂಗೊದೆಪ್ಪ ಹಾಗೂ ರಾಜು ಸಂಬಳದ ವಿಚಾರ ವಾಗಿ ಗಲಾಟೆ ಮಾಡಿ ಹೊಡೆದಾಡಿಕೊಂಡಿದ್ದು, ಅದರಲ್ಲಿ ರಾಜು ಎಂಬಾತನು ಪಂಚಾಂಗದ ಬಳಿಯಲ್ಲೇ ಇದ್ದ ಕೆಂಪು ಕಲ್ಲನ್ನು ಎತ್ತಿ ಸಂಗೋದಪ್ಪ ಅವರ ತಲೆಯ ಮೇಲೆ ಹಾಕಿ ಕೊಲೆ ಮಾಡಿರುವುದಾಗಿ ಆರೋಪಿಸಲಾಗಿತ್ತು.

ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು ಎಂದು ತಿಳಿದು ಬಂದಿದೆ.

ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದ ನ್ಯಾಯಾಧೀಶ ಅಬ್ದುಲ್ ರಹೀಂ ಹುಸೇನ ಶೇಖ್ ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟು, ಆತನಿಗೆ ಕಲಂ: 302 ಐಪಿಸಿಯಡಿ ಜೀವಾವಧಿ ಶಿಕ್ಷೆ ಮತ್ತು 5,000 ರೂ. ದಂಡ, ಕಲಂ 504 ಐಪಿಸಿಯಡಿ ಒಂದು ವರ್ಷ ಜೈಲು ಶಿಕ್ಷೆ, 5,000ರೂ. ದಂಡ, ಕಲಂ 506 ಐಪಿಸಿರಡಿ 1 ವರ್ಷ ಸಜೆ, 5,000ರೂ. ದಂಡ ಹಾಗೂ ಕಲಂ 324 ಐಪಿಸಿರಡಿ 1 ವರ್ಷ ಶಿಕ್ಷೆ ರೂ 5,000ರೂ. ದಂಡವನ್ನು ವಿಧಿಸಿ ಆದೇಶ ನೀಡಿದ್ದಾರೆ.