ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ಸಮೀಪದ ಶಿರೂರು ಗ್ರೀನ್ ವ್ಯಾಲಿ ಶಾಲೆಯ ಬಳಿ ನಿಯಂತ್ರಣ ತಪ್ಪಿದ ಲಾರಿಯೊಂದು ನಾಲ್ಕು ದ್ವಿಚಕ್ರ ವಾಹನಗಳು ಹಾಗೂ ಹೈವೆ ಪೆಟ್ರೋಲ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟ ಘಟನೆ ಗುರುವಾರ ನಡೆದಿದೆ
ಮೃತರನ್ನು ಶಿರೂರು ನಿವಾಸಿ ನಾಗೇಂದ್ರ ಮಹಾಲೆ (45) ಎಂದು ತಿಳಿದು ಬಂದಿದೆ.
ಘಟನಾ ಸ್ಥಳದಲ್ಲಿ ಈ ಹಿಂದೆ ಅಪಘಾತಕ್ಕೀಡಾಗಿದ್ದ ಸರಕು ತುಂಬಿದ ಲಾರಿಯನ್ನು ಜೆಸಿಬಿ ಸಹಾಯದಿಂದ ತೆರವುಗೊಳಿಸುವ ಕಾರ್ಯ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಸಂಚಾರ ನಿಯಂತ್ರಿಸಲಾಗುತ್ತಿತ್ತು. ನಾಗೇಂದ್ರ ಮಹಾಲೆ ಸೇರಿದಂತೆ ಹಲವರು ರಸ್ತೆ ಬದಿಯಲ್ಲಿ ನಿಂತು ಲಾರಿ ತೆರವು ಕಾರ್ಯವನ್ನು ವೀಕ್ಷಿಸುತ್ತಿದ್ದರು.
ಈ ವೇಳೆ ಕೇರಳದಿಂದ ಮಹಾರಾಷ್ಟ್ರಕ್ಕೆ ರಬ್ಬರ್ ತುಂಬಿಕೊಂಡು ತೆರಳುತ್ತಿದ್ದ ಮತ್ತೊಂದು ಲಾರಿ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಜಾರಿದೆ. ಬಳಿಕ ಅಲ್ಲಿ ನಿಲ್ಲಿಸಿದ್ದ ನಾಲ್ಕು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಲಾರಿ, ಮೂರು ಬೈಕ್‌ಗಳನ್ನು ಎಳೆದುಕೊಂಡು ಹೋಗಿ ಮುಂದಕ್ಕೆ ಸಾಗಿದ್ದು, ಬಳಿಕ ಹೈವೆ ಪೆಟ್ರೋಲ್ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಅದೇ ವೇಳೆ ದ್ವಿಚಕ್ರ ವಾಹನಗಳ ಸಮೀಪ ನಿಂತಿದ್ದ ನಾಗೇಂದ್ರ ಮಹಾಲೆ ಅವರಿಗೂ ಲಾರಿ ಡಿಕ್ಕಿ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆಗೆ ಸಂಬಂಧಿಸಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪೊಲೀಸರು ಈ ಘಟನೆಗೆ ಎಂಬ ತನಿಖೆ ನಡೆಸುತ್ತಿದ್ದಾರೆ.





