Home Crime ಕಡಬ: ಬರ್ತ್‌ಡೇ ವಿಶ್ ಮಾಡಲು ಬಂದು ಜಗಳ : ಯುವಕನ ಕಾರಿನ ಕೀ ಚರಂಡಿಗೆ ಎಸೆದ...

ಕಡಬ: ಬರ್ತ್‌ಡೇ ವಿಶ್ ಮಾಡಲು ಬಂದು ಜಗಳ : ಯುವಕನ ಕಾರಿನ ಕೀ ಚರಂಡಿಗೆ ಎಸೆದ ಯುವತಿ : 4 ಗಂಟೆ ಶೋಧ…!!

ಕಡಬ : ಸ್ನೇಹಿತನ ಕಾರು ತಂದು ಯುವತಿಗೆ ಜನ್ಮದಿನದ ಶುಭಾಶಯ ತಿಳಿಸಲು ಬಂದ ಯುವಕನೊಬ್ಬ, ಯುವತಿಯ ಜೊತೆಗಿನ ಗಲಾಟೆಯಿಂದಾಗಿ ನಡುರಸ್ತೆಯಲ್ಲೇ ಪೇಚಿಗೆ ಸಿಲುಕಿದ ಘಟನೆ ಕಡಬ ಪೇಟೆಯ ಸಂತೆಕಟ್ಟೆಯಲ್ಲಿ ನಡೆದಿದೆ.

ಕೋಪಗೊಂಡ ಯುವತಿಯು ಮೊದಲ ಮಹಡಿಯಿಂದ ಕಾರಿನ ಕೀಯನ್ನು ಚರಂಡಿಗೆ ಎಸೆದಿದ್ದು, ಕೀ ಹುಡುಕಲು 4 ಗಂಟೆಗಳ ಕಾಲ ಯುವಕ ಹರಸಾಹಸ ಪಟ್ಟಿದ್ದಾನೆ.

ಸ್ಥಳೀಯರ ಮಾಹಿತಿಯ ಪ್ರಕಾರ, ಪುತ್ತೂರು ತಾಲೂಕಿನ ಈಶ್ವರಮಂಗಲ ಮೂಲದ ಯುವಕನೊಬ್ಬ ತನ್ನ ಸ್ನೇಹಿತನ ಕಾರನ್ನು ಪಡೆದುಕೊಂಡು ಕಡಬದ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪರಿಚಿತ ಯುವತಿಗೆ ಬರ್ತ್‌ಡೇ ವಿಶ್ ಮಾಡಲು ಬಂದಿದ್ದ. ಕಚೇರಿಯ ಮೊದಲ ಮಹಡಿಯಲ್ಲಿ ಇಬ್ಬರ ನಡುವೆ ಭೇಟಿಯಾದಾಗ, ಕ್ಷುಲ್ಲಕ ವಿಚಾರಕ್ಕೆ ಮಾತಿನ ಚಕಮಕಿ ಆರಂಭವಾಗಿದೆ. ಮಾತಿಗೆ ಮಾತು ಬೆಳೆದು ವಾಗ್ವಾದ ತಾರಕಕ್ಕೇರಿದಾಗ, ಕೆರಳಿದ ಯುವತಿಯು ಯುವಕನ ಕೈಯಲ್ಲಿದ್ದ ಕಾರಿನ ಕೀಯನ್ನು ಕಸಿದುಕೊಂಡು ಕಿಟಕಿಯಿಂದ ನೇರವಾಗಿ ಕೆಳಗಿದ್ದ ಚರಂಡಿಗೆ ಎಸೆದಿದ್ದಾಳೆ.

ಕೀ ಚರಂಡಿಯ ಹೂಳು ಹಾಗೂ ಕೊಳಚೆ ನೀರಿನೊಳಗೆ ಬಿದ್ದು ಮರೆಯಾದ ಕಾರಣ ಕಾರು ಅನ್‌ಲಾಕ್ ಮಾಡಲು ಸಾಧ್ಯವಾಗದೆ ಯುವಕ ದಿಕ್ಕುತೋಚದಂತಾಗಿದ್ದಾನೆ. ನಂತರ ಸ್ಥಳೀಯರ ನೆರವಿನೊಂದಿಗೆ ಚರಂಡಿ ಬದಿಯ ಗಿಡಗಂಟಿಗಳನ್ನು ತೆರವುಗೊಳಿಸಿ, ಕೊಳಚೆಯಲ್ಲೇ ಕೀಗಾಗಿ ಹುಡುಕಾಟ ಆರಂಭಿಸಿದ್ದಾನೆ. ಜನನಿಬಿಡ ಸಂತೆಕಟ್ಟೆಯಲ್ಲಿ ಈ ದೃಶ್ಯ ಕಂಡು ನೂರಾರು ಸಾರ್ವಜನಿಕರು ಜಮಾಯಿಸಿದ್ದು, ಪುಕ್ಕಟೆ ಮನೋರಂಜನೆ ಪಡೆದಿದ್ದಾರೆ.

ಸುಮಾರು 4 ಗಂಟೆಗಳ ಕಾಲ ಕಾರಿನ ಕೀಗಾಗಿ ಇಡೀ ಚರಂಡಿಯನ್ನೇ ಜಾಲಾಡಿದರೂ ಕೀ ಪತ್ತೆಯಾಗಲಿಲ್ಲ. ಅಂತಿಮವಾಗಿ ಸಂಜೆ 7.30ರ ವೇಳೆಗೆ ಬೇಸತ್ತ ಯುವಕ, ಸ್ನೇಹಿತನ ಕಾರನ್ನು ರಸ್ತೆಯಲ್ಲೇ ಬಿಟ್ಟು ಆಟೋ ರಿಕ್ಷಾ ಹಿಡಿದು ಮನೆಗೆ ತೆರಳಿದ್ದಾನೆ. ಈ ವಿಚಿತ್ರ ಹಾಗೂ ತಮಾಷೆಯ ಘಟನೆಯ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರ ತಮಾಷೆಯ ಕಮೆಂಟ್‌ಗಳಿಗೆ ಗ್ರಾಸವಾಗಿದೆ.