Home Crime ಮಂಗಳೂರು : ಫೇಸ್‌ಬುಕ್‌ ಜಾಹೀರಾತು ನಂಬಿ 16.2 ಲಕ್ಷ ಕಳೆದುಕೊಂಡ ಮಹಿಳೆ…!!

ಮಂಗಳೂರು : ಫೇಸ್‌ಬುಕ್‌ ಜಾಹೀರಾತು ನಂಬಿ 16.2 ಲಕ್ಷ ಕಳೆದುಕೊಂಡ ಮಹಿಳೆ…!!

ಮಂಗಳೂರು, ಆ.2: ಆನ್‌ಲೈನ್‌ ಹೂಡಿಕೆ ಹೆಸರಿನಲ್ಲಿ ಸೈಬರ್‌ ವಂಚನೆಗೆ ಮಂಗಳೂರಿನ 61 ವರ್ಷದ ಮಹಿಳೆಯೊಬ್ಬರು ಬಲಿಯಾಗಿದ್ದು, ಬರೋಬ್ಬರಿ 16.2 ಲಕ್ಷ ರೂ ಹಣವನ್ನು ಕಳೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಬಂದ ಜಾಹೀರಾತನ್ನು ನಂಬಿ ಹೂಡಿಕೆ ಮಾಡಿದ ಮಹಿಳೆ ಮೋಸ ಹೋಗಿರುವುದು ಬೆಳಕಿಗೆ ಬಂದಿದೆ.

ಸೈಬರ್‌ ಆರ್ಥಿಕ ಮತ್ತು ನಾರ್ಕೋಟಿಕ್ಸ್‌ ಪೊಲೀಸ್‌ ಠಾಣೆಗೆ ನೀಡಿರುವ ದೂರಿನ ಅನುಸಾರ, ಎಪ್ರಿಲ್‌ನಲ್ಲಿ ಮಹಿಳೆ ಫೇಸ್‌ಬುಕ್‌ನಲ್ಲಿ ಹೂಡಿಕೆಗೆ ಕುರಿತು ಬಂದ ಜಾಹೀರಾತು ಲಿಂಕನ್ನು ಕ್ಲಿಕ್‌ ಮಾಡಿ ಟೆಲಿಗ್ರಾಂ ಗ್ರೂಪ್‌ಗೆ ಸೇರಿದ್ದರು. ಯುಕೆ ದೇಶದ ಕೋಡ್‌ ಹೊಂದಿರುವ ಫೋನ್‌ ಸಂಖ್ಯೆಗಳಿಂದ ಅಪರಿಚಿತ ವ್ಯಕ್ತಿ ಸಂಪರ್ಕ ಮಾಡಿ ಹೆಚ್ಚಿನ ಲಾಭ ನೀಡುವುದಾಗಿ ಹೇಳಿದ್ದ.

ವಂಚನ ಮಾತನ್ನು ನಂಬಿದ ಮಹಿಳೆ ಎಪ್ರಿಲ್‌ 18 ರಂದು ಮೊದಲಿಗೆ 20,372 ರೂ.ವರ್ಗಾವಣೆ ಮಾಡಿದ್ದರು. ನಂತರ ಹಂತ ಹಂತವಾಗಿ ಒಟ್ಟು 16.2 ಲಕ್ಷ ರೂ ಹಣವನ್ನು ವಂಚಕರು ನೀಡಿದ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿದ್ದಾರೆ.

ಹಣ ಹಿಂತಿರುಗಿಸುವಂತೆ ಕೇಳಿದಾಗ ಯಾವುದೇ ಉತ್ತರ ಸಿಗದೇ ಇದ್ದಾಗ ತಾನು ಮೋಸ ಹೋಗಿರುವುದು ಮಹಿಳೆಗೆ ಅರಿವಾಗಿದೆ. ಕೂಡಲೇ ಅವರು ಸಿಇಎನ್‌ ಸೈಬರ್‌ ಕ್ರೈಮ್‌ ಪೊಲೀಸ್‌ ಠಾಣೆಗೆ ದೂರನ್ನು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲು ಮಾಡಿ ತನಿಖೆ ಮುಂದುವರಿಸಿದ್ದಾರೆ.