ಮಂಗಳೂರು : ನಗರದ ನಟಿ ರೂಪಶ್ರೀ ವರ್ಕಾಡಿ (ರೂಪಾ ವರ್ಕಾಡಿ) ಅವರು ‘ಮಿಥ್ಯ’ ಚಿತ್ರದ ಅದ್ಭುತ ನಟನೆಗಾಗಿ ೭೨ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ‘ಅತ್ಯುತ್ತಮ ಪೋಷಕ ನಟಿ’ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಪ್ರಶಸ್ತಿಯು ಕನ್ನಡ ಚಿತ್ರರಂಗದಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು, ಈ ಸಾಧನೆ ಮಾಡಿದ ಕನ್ನಡದ ಮೊದಲ ಪೋಷಕ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಶಸ್ತಿ ಘೋಷಣೆಯ ನಂತರ ಅವರು ಮಾಧ್ಯಮಗಳ ಜೊತೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಪ್ರತಿಭಾನ್ವಿತೆ ರೂಪಶ್ರೀ ವರ್ಕಾಡಿ ಅವರು ಕನ್ನಡದ ‘ಮಿಥ್ಯ’ ಚಿತ್ರದಲ್ಲಿನ ಅದ್ಭುತ ನಟನೆಗಾಗಿ ಅತ್ಯುತ್ತಮ ಪೋಷಕ ನಟಿ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಪ್ರಶಸ್ತಿ ಘೋಷಣೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ, ಅವರು ಕೇವಲ 500 ರೂ.ಗಳ ಸಂಭಾವನೆಗೆ ರಂಗಭೂಮಿಗೆ ಕಾಲಿಟ್ಟ ತಮ್ಮ ಹಳೆಯ ದಿನಗಳನ್ನು ನೆನೆಪಿಸಿಕೊಂಡು ಭಾವುಕರಾದರು.
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ರೂಪಶ್ರೀ ವರ್ಕಾಡಿ ಅವರಿಗೆ ‘ಮಿಥ್ಯ’ ಚಿತ್ರದ ಸಹಜ ಅಭಿನಯಕ್ಕಾಗಿ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.
ಇವರು ಮೊದಲು ನಾಟಕಗಳಲ್ಲಿ ಅಭಿನಯಿಸುತ್ತಿದ್ದರು, ರಂಗತರಂಗ ಕಾಪು, ಕಲಾ ಸಂಗಮ ಮಂಗಳೂರು, ಇನ್ನೂ ಹಲವಾರು ನಾಟಕ ತಂಡಗಳಲ್ಲಿ ಹಾಗೂ ‘ಲುಂಗಿ’, ‘ಸುರ’ ,ತುಳು ಅನೇಕ ಚಿತ್ರಗಳಲ್ಲಿ ನಟಿಸಿರುವ ಅವರು, ಇಂದು ರಾಷ್ಟ್ರಮಟ್ಟದಲ್ಲಿ ಕರಾವಳಿಯ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.
ಅತ್ಯಂತ ತಳಮಟ್ಟದ ಬಡತನದಿಂದ ಬಂದು, ಯಾವುದೇ ಅಬ್ಬರವಿಲ್ಲದೆ ಭಾವನಾತ್ಮಕವಾಗಿ ಪಾತ್ರಗಳನ್ನು ಜೀವಿಸುವ ಮೂಲಕ ಅವರು ಜ್ಯೂರಿ ಮಂಡಳಿಯ ಗಮನ ಸೆಳೆದಿದ್ದಾರೆ.






