Home Latest ಶಬರಿಮಲೆ ಸನ್ನಿಧಾನಂ ಮೇಲೆ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಹಾರಾಟ : ಕೇರಳ ಪೊಲೀಸರಿಂದ ಎಫ್‌ಐಆರ್ ದಾಖಲು…!!

ಶಬರಿಮಲೆ ಸನ್ನಿಧಾನಂ ಮೇಲೆ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಹಾರಾಟ : ಕೇರಳ ಪೊಲೀಸರಿಂದ ಎಫ್‌ಐಆರ್ ದಾಖಲು…!!

ಶಬರಿಮಲೆ : ಶಬರಿಮಲೆಯ ಪವಿತ್ರ ಸನ್ನಿಧಾನಂ ಮೇಲೆ ಭಾರತೀಯ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪೂರ್ವಾನುಮತಿ ಇಲ್ಲದೆ ಅತ್ಯಂತ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಿದ್ದು, ಭದ್ರತಾ ನಿಯಮಗಳ ಉಲ್ಲಂಘನೆಗಾಗಿ ಪಂಬಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೋಸ್ಟ್ ಗಾರ್ಡ್‌ನ ‘ಚೇತಕ್’ (ನೋಂದಣಿ ಸಂಖ್ಯೆ CG-821) ಹೆಲಿಕಾಪ್ಟರ್ ಸನ್ನಿಧಾನಂ ವಲಯದಲ್ಲಿ ನಾಲ್ಕು ಬಾರಿ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಿದೆ.

ಈ ವೇಳೆ ಹೆಲಿಕಾಪ್ಟರ್ ದೇವಾಲಯದ ಪವಿತ್ರ ಧ್ವಜಸ್ತಂಭದ (ಕೋಡಿಮಾರಂ) ಕೇವಲ ಐದು ಮೀಟರ್ ಹತ್ತಿರಕ್ಕೆ ಬಂದಿದ್ದು, ಭಕ್ತರು ಹಾಗೂ ಸಿಬ್ಬಂದಿಯಲ್ಲಿ ಆತಂಕ ಮೂಡಿಸಿದೆ. ಹೆಲಿಕಾಪ್ಟರ್‌ನಿಂದ ದೇವಾಲಯದ ಆವರಣವನ್ನು ಚಿತ್ರೀಕರಿಸಿರುವ ಶಂಕೆಯೂ ವ್ಯಕ್ತವಾಗಿದೆ.

ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 118(ಇ) ಅಡಿಯಲ್ಲಿ ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ತಂದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. “ವಿಶೇಷ ಭದ್ರತಾ ವಲಯದಲ್ಲಿ ಅನುಮತಿ ಇಲ್ಲದೆ ಹಾರಾಟ ನಡೆಸಿರುವುದು ನಿಯಮಗಳ ಉಲ್ಲಂಘನೆಯಾಗಿದೆ,” ಎಂದು ಪಂಬಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೋಸ್ಟ್ ಗಾರ್ಡ್, “ಇದು ನಿಯಮಿತ ತರಬೇತಿ ಹಾರಾಟವಾಗಿತ್ತು. ಕೊಚ್ಚಿಯಿಂದ ಹಾರಿದ್ದ ಹೆಲಿಕಾಪ್ಟರ್ 6,000 ಅಡಿ ಎತ್ತರದಲ್ಲಿತ್ತು. ಆದರೆ ಹವಾಮಾನ ವೈಪರೀತ್ಯ ಹಾಗೂ ದಟ್ಟ ಮೋಡ ಕವಿದ ಕಾರಣ ಪೈಲಟ್ ಮಾರ್ಗ ಬದಲಿಸಬೇಕಾಯಿತು,” ಎಂದು ಸಮರ್ಥಿಸಿಕೊಂಡಿದೆ