ಉಡುಪಿ : ಆದಿ ಉಡುಪಿ ಸಮೀಪ ಬೈಕ್ ಸ್ಕಿಡ್ ಆಗಿ ಬಿದ್ದಿದ್ದ ಕೇಬಲ್ ಸಿಬ್ಬಂದಿಯೊಬ್ಬರು ಮರುದಿನ ಅಸ್ವಸ್ಥಗೊಂಡು ಮೃತಪಟ್ಟಿರುವ ಘಟನೆ ನಡೆದಿದೆ. ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
ಉಡುಪಿ ಶಿವಳ್ಳಿ ಗ್ರಾಮದ ಹರೀಶ ಪೂಜಾರಿ ಅವರ ಪತ್ನಿಯ ತಮ್ಮ ಗಣೇಶ್ ಪಾಲನ್ (42) ಅವರು ರಾಜೀವ್ ನಗರ, ನಿಟ್ಟೂರಿನಲ್ಲಿ ಕುಟುಂಬದೊಂದಿಗೆ ವಾಸವಿದ್ದು, ಕೇಬಲ್ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದರು.
ಜುಲೈ 17ರಂದು ರಾತ್ರಿ ಸುಮಾರು 9.05ಕ್ಕೆ ಕೆಲಸ ಮುಗಿಸಿ ಆದಿ ಉಡುಪಿ ಕೇಬಲ್ ಕಚೇರಿ ಸಮೀಪ ತಮ್ಮ ಕೆಎ-20-ಎಚ್‌ಜೆ-5938 ಮೋಟಾರ್‌ಸೈಕಲ್‌ನಲ್ಲಿ ತೆರಳುತ್ತಿದ್ದ ವೇಳೆ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದರು. ಆದರೆ ಅವರು ಯಾವುದೇ ಚಿಕಿತ್ಸೆ ಪಡೆಯದೆ ಮನೆಗೆ ತೆರಳಿದ್ದರು.
ಮರುದಿನ ಬೆಳಿಗ್ಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪತ್ನಿ ಪೂಜಾ ಅವರು ಚಿಕಿತ್ಸೆಗಾಗಿ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ದಾರಿಮಧ್ಯೆ ಗಣೇಶ್ ಅವರ ಬಾಯಿಯಿಂದ ನೊರೆ ಬಂದಿದ್ದು, ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು.
ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿದಾಗ ಅದಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.
ಬೈಕ್ ಅಪಘಾತದಲ್ಲಿ ಉಂಟಾದ ಗಾಯದಿಂದಲೋ ಅಥವಾ ಇತರ ಯಾವುದೇ ಕಾರಣದಿಂದಲೋ ಮರಣ ಸಂಭವಿಸಿರಬಹುದು ಎಂದು ಶಂಕಿಸಲಾಗಿದ್ದು, ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.




