ಕೊಲ್ಲೂರು: ಬೈಂದೂರು ತಾಲೂಕಿನ ಕೊಲ್ಲೂರು ಗ್ರಾಮದ ಹೆಗ್ಡೆಹಕ್ಲು ನಿವಾಸಿ ಹಾಗೂ ಕಂದಾಯ ಇಲಾಖೆಯ ಉದ್ಯೋಗಿಯಾಗಿರುವ ಅಂಗವಿಕಲ ಮಹಿಳೆ ಚಂದ್ರಾವತಿ (50) ಅವರ ಮೇಲೆ ಹಲ್ಲೆ ನಡೆದಿರುವ ಕುರಿತು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 16ರಂದು ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ, ಮನೆಯ ಪಕ್ಕದ ನಿವಾಸಿ ಯಶೋಧ ಅವರು ಮನೆಯ ಹತ್ತಿರದ ದಾರಿಗೆ ಕಲ್ಲು ಮತ್ತು ಗಿಡಗಳನ್ನು ಅಡ್ಡವಾಗಿ ಇಟ್ಟಿದ್ದರು ಎನ್ನಲಾಗಿದೆ. ಈ ವೇಳೆ ಚಂದ್ರಾವತಿ ಅವರು ತಮ್ಮ ಮೂರು ಚಕ್ರದ ವಾಹನದಲ್ಲಿ ತೆರಳುತ್ತಿದ್ದಾಗ ವಾಹನದ ಚಕ್ರ ತಿರುಗಿ ಬೀಳುವ ಪರಿಸ್ಥಿತಿ ಉಂಟಾಗಿದೆ. ದಾರಿಯಲ್ಲಿದ್ದ ಕಲ್ಲನ್ನು ತೆರವುಗೊಳಿಸಲು ಮುಂದಾದಾಗ ಯಶೋಧ ಅವರು ಬೆತ್ತದಿಂದ ಹಲ್ಲೆ ನಡೆಸಿ, ಅಂಗವೈಕಲ್ಯವನ್ನು ಅವಹೇಳನ ಮಾಡುವ ರೀತಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅಂಗವಿಕಲೆಯಾಗಿರುವ ಕಾರಣ ತಕ್ಷಣ ಠಾಣೆಗೆ ತೆರಳಿ ದೂರು ನೀಡಲು ಸಾಧ್ಯವಾಗದೆ, ಬಳಿಕ ತಮ್ಮ ಪತಿಯೊಂದಿಗೆ ಚರ್ಚಿಸಿ ಕೊಲ್ಲೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಈ ಸಂಬಂಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 47/2026ರಡಿ ಬಿಎನ್‌ಎಸ್ ಕಲಂ 126(2), 118(1), 352 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.




