Home Crime ಕಡಬ : ತಡರಾತ್ರಿ ಮನೆಗೆ ಅಕ್ರಮ ಪ್ರವೇಶ ಆರೋಪ : ಪೊಲೀಸ್ ಹೆಡ್ ಕಾನ್‌ಸ್ಟೇಬಲ್‌ ಅಮಾನತು…!!

ಕಡಬ : ತಡರಾತ್ರಿ ಮನೆಗೆ ಅಕ್ರಮ ಪ್ರವೇಶ ಆರೋಪ : ಪೊಲೀಸ್ ಹೆಡ್ ಕಾನ್‌ಸ್ಟೇಬಲ್‌ ಅಮಾನತು…!!

ಕಡಬ:  ದಕ್ಷಿಣ ಕನ್ನಡ ಜಿಲ್ಲೆಯಕಡಬದ ಕೊಯಿಲ ಎಂಬಲ್ಲಿ ತಡರಾತ್ರಿ ಮನೆಗೆ ಅಕ್ರಮವಾಗಿ ಪ್ರವೇಶಿಸಿ, ಮನೆಯ ಸದಸ್ಯರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಪೊಲೀಸ್ ಹೆಡ್‌ ಕಾನ್‌ಸ್ಟೇಬಲ್‌ವೊಬ್ಬನ ವಿರುದ್ಧ ಕಡಬದಲ್ಲಿ ಪ್ರಕರಣ ದಾಖಲಾದ ಘಟನೆ ನಡೆದಿದೆ.

ಪ್ರಕರಣದ ಬಗ್ಗೆ ಪೊಲೀಸ್ ಮಾಹಿತಿಯಂತೆ, ಕೊಯಿಲ ಗ್ರಾಮದ ನಿವಾಸಿ ಬಾಬು ಗೌಡ (53) ಅವರು ನೀಡಿದ ದೂರು ಮೇರೆಗೆ, ಬುಧವಾರ ತಡರಾತ್ರಿ ತಮ್ಮ ಮನೆಯ ಪಕ್ಕದಲ್ಲೇ ಇರುವ ಸಹೋದರ ಹರೀಶ ಅವರ ಮನೆಯೊಳಗಿಂದ ಜೋರಾದ ಶಬ್ದ ಕೇಳಿ, ಅವರು ಸ್ಥಳಕ್ಕೆ ಧಾವಿಸಿದಾಗ ಮನೆಯ ಸದಸ್ಯರು ಅಪರಿಚಿತ ವ್ಯಕ್ತಿಯೊಬ್ಬನನ್ನು ಹಿಡಿದಿಟ್ಟಿರುವುದು ಬೆಳಕಿಗೆ ಬಂದಿದೆ. ತಪ್ಪಿಸಿಕೊಳ್ಳುವ ಯತ್ನದಲ್ಲಿ ಆರೋಪಿ ಮನೆಯ ಸದಸ್ಯನಾದ ಚೇತನ್ ಮೇಲೆ ದಾಳಿ ನಡೆಸಿದ್ದಾನೆ. ನಂತರ ವಿಚಾರಣೆ ವೇಳೆ, ಆ ಅಪರಿಚಿತ ವ್ಯಕ್ತಿ ಕಡಬ ಪೊಲೀಸ್ ಠಾಣೆಯ ಹೆಡ್‌ ಕಾನ್​ಸ್ಟೇಬಲ್ ರಾಜು ನಾಯ್ಕ ಎಂಬುದು ದೃಢಪಟ್ಟಿದೆ. ಘಟನೆಯ ಗಂಭೀರತೆಯನ್ನು ಪರಿಗಣಿಸಿದ ಕಡಬ ಪೊಲೀಸರು, ರಾಜು ನಾಯ್ಕ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಹೆಡ್‌ ಕಾನ್ಸ್ಟೇಬಲ್ ರಾಜು ನಾಯ್ಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಜೊತೆಗೆ, ಘಟನೆಯ ಹಿನ್ನೆಲೆಯಲ್ಲಿ ರಾಜು ನಾಯ್ಕನನ್ನು ತಕ್ಷಣವೇ ಜಾರಿಗೆ ಬರುವಂತೆ ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.